2.4.13

ಜಾತಿಯೇರ‍್ಪಾಡನ್ನು ತೆಗೆದುಹಾಕುವಲ್ಲಿ ಬರವಣಿಗೆಯ ಪಾತ್ರ

2.4.13
ಜಾತಿಯೆಂಬುದು ಕನ್ನಡಿಗರ ರಾಜಕೀಯವನ್ನು ಎಶ್ಟು ನಿಯಂತ್ರಿಸುತ್ತದೆ ಎಂಬುದು ಹೆಚ್ಚು-ಕಡಿಮೆ ಎಲ್ಲರಿಗೂ ಗೊತ್ತಿರುವ ವಿಶಯ. ಆದರೆ ಜಾತಿ-ಜಗಳಗಳು ರಾಜಕೀಯದ ಹೊರಗೆ ಒಳಗಿನಶ್ಟಿರುವುದಿಲ್ಲ ಎಂಬುದು ಗಮನಿಸುವಂತದ್ದು. ಇದಕ್ಕೆ ಮೂರು ಮುಕ್ಯವಾದ ಕಾರಣಗಳಿವೆ.

ಒಂದು, ಕನ್ನಡಿಗರೆಲ್ಲರಿಗೂ ಸಮನಾದ ಮನುಶ್ಯತನವೇ ಹಲವು ಕಡೆ ಬೇರೆ ಬೇರೆ ಜಾತಿಯವರು ಸೇರಿದಾಗ ಅವರ ನಡುವೆ ಇಲ್ಲ-ಸಲ್ಲದ ವ್ಯತ್ಯಾಸಗಳನ್ನು ಕಾಣದೆ ಸಮಾನತೆಯನ್ನು ಹುಡುಕಿ ಅದರ ನೇರಕ್ಕೆ ನಡೆಯುವಂತೆ ಮಾಡುತ್ತದೆ.

ಎರಡು, ಕನ್ನಡಿಗರೆಲ್ಲರೂ ಒಂದೇ ನುಡಿಯನ್ನು ಆಡುವುದರಿಂದ ಆ ನುಡಿಯು ಅವರ ನಡುವಿನ ಸೇತುವೆಯಾಗಿ ಮನುಶ್ಯತವು ಒಂದು ಜಾತಿಯಿಂದ ಇನ್ನೊಂದು ಜಾತಿಗೆ ಹರಿದಾಡಲು ಅವಕಾಶ ಮಾಡಿಕೊಡುತ್ತದೆ.

ಮೂರು, ಜಾತಿಯೇರ‍್ಪಾಡೇ ಬೇರೆ ಬೇರೆ ಜಾತಿಯ ಕನ್ನಡಿಗರನ್ನು ಜಗಳವಾಡುವಶ್ಟು ಹತ್ತಿರಕ್ಕೂ ಬಾರದಂತೆ ನೋಡಿಕೊಳ್ಳುತ್ತದೆ. ಒಬ್ಬರನ್ನೊಬ್ಬರು ಮದುವೆಯಾಗುವಂತಿಲ್ಲ, ಒಬ್ಬರೊಡನೆ ಇನ್ನೊಬ್ಬರು ಕುಳಿತು ತಿನ್ನುವಂತಿಲ್ಲ, ಒಬ್ಬರನ್ನು ಇನ್ನೊಬ್ಬರು ಮುಟ್ಟಿಸಿಕೊಳ್ಳುವಂತಿಲ್ಲ ಎಂಬ ಕಟ್ಟಳೆಗಳು ಏರ‍್ಪಟ್ಟಿರುವುದರಿಂದ ಬೇರೆ ಬೇರೆ ಜಾತಿಗಳ ಜನರು ಒಬ್ಬರಿಂದೊಬ್ಬರು ದೂರ ಉಳಿದು ಹೆಚ್ಚು ಜಗಳವಾಡದೆ ಇರುತ್ತಾರೆ.

ಮೇಲಿನ ಮೂರು ಕಾರಣಗಳಲ್ಲಿ ಮೊದಲ ಎರಡು ಹಾಗೆಯೇ ಮುಂದುವರೆಯಬೇಕು, ಆದರೆ ಮೂರನೆಯದು ಇಲ್ಲವಾಗಬೇಕು. ಆಗಲೇ ಕನ್ನಡಿಗರು ಜಾತಿಯನ್ನು ಮೀರಿ ಮುಂದುವರೆಯಲು ಸಾದ್ಯ. ಬೇರೆ ಬೇರೆ ಜಾತಿಯವರು ದೂರವುಳಿದಾಗ ಕೂಡಣದಲ್ಲಿ (ಸಮಾಜದಲ್ಲಿ) ಜಗಳಗಳು ಕಡಿಮೆಯಿರುತ್ತವೆ, ಆದರೆ ಅವುಗಳು ರಾಜಕೀಯದಲ್ಲಿ ದೊಡ್ಡ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತವೆ. ಆದುದರಿಂದ ಬೇರೆ ಬೇರೆ ಜಾತಿಯ ಜನರು ಒಗ್ಗೂಡಬೇಕೆಂಬುದರಲ್ಲಿ, ಹತ್ತಿರ ಬರಬೇಕೆಂಬುದರಲ್ಲಿ ಎರಡು ಮಾತಿಲ್ಲ.

ಆದರೆ ಈ ’ಹತ್ತಿರ ಬರುವಿಕೆ’ಯಲ್ಲಿ ಒಂದು ತೊಂದರೆಯಿದೆ. ಅದೇನೆಂದರೆ, ಬೇರೆ ಬೇರೆ ಜಾತಿಯವರು ದೂರವುಳಿಯದೆ ಎಲ್ಲರೂ ಹತ್ತಿರ ಬರುವುದಕ್ಕೆ ಪ್ರೇರಣೆಯೇ ಇಲ್ಲದಂತಿರುವುದು. ಹತ್ತಿರ ಬಂದು ಮಾಡುವುದಾದರೂ ಏನು? ಸಾವಿರಾರು ವರುಶಗಳಿಂದ ದೂರವುಳಿಯುವ ಸಂಸ್ಕ್ರುತಿಯನ್ನು ಬೆಳೆಸಿಕೊಂಡಿರುವುದರಿಂದ ಹತ್ತಿರ ಬರಲು ಕಾರಣಗಳೇ ಇಲ್ಲದಂತಾಗಿ ’ಹತ್ತಿರ ಬರುವಿಕೆ’ ಅರ‍್ತ ಕಳೆದುಕೊಂಡಿದೆ. ಆದರೆ ಈ ತೊಂದರೆಯನ್ನು ಬಗೆಹರಿಸಿಕೊಳ್ಳದಿದ್ದರೆ ಜಾತಿಯೇರ‍್ಪಾಡಿಗೆ ಕೊನೆಯಿಲ್ಲ.

ಇದಕ್ಕೆ ಬಗೆಹರಿಕೆಯೇ ಇಲ್ಲವೆಂದೇನಿಲ್ಲ. ಮುಕ್ಯವಾಗಿ, ಬೇರೆ ಬೇರೆ ಜಾತಿಯ ಕನ್ನಡಿಗರೆಲ್ಲ ಹತ್ತಿರ ಬರಬೇಕಾದರೆ ಹಾಗೆ ಬಂದವರು ’ಮಾಡುಗ’ರಾಗಿ ಒಂದಲ್ಲ ಒಂದು ಕೆಲಸದಲ್ಲಿ ತೊಡಗಿಕೊಳ್ಳಲು ಅವಕಾಶವಿರಬೇಕು; ಮೇಲುಜಾತಿಯವರು ಮಾತ್ರ ’ಮಾಡುಗರಾಗಿ’ ಕೆಳಜಾತಿಯವರೆಲ್ಲ ’ಮಾಡಿಸಿಕೊಳ್ಳುಗ’ರಾಗಿ ತೊಡಗಿಕೊಳ್ಳಲು ಮಾತ್ರ ಅವಕಾಶವಿದ್ದರೆ ಪ್ರಯೋಜನವಿಲ್ಲ.

ಎಲ್ಲ ಜಾತಿಯ ಜನರೂ ಮಾಡುಗರಾಗಿ ಹತ್ತಿರ ಬಂದು, ಒಬ್ಬರನ್ನೊಬ್ಬರು ಗವ್ರವಿಸಿ, ಒಡಗೂಡಿ, ಮಾಡುಗತನದ ಈ ನಿಜವಾದ ಕನ್ನಡದ ಶಕ್ತಿಯಿಂದ ಕನ್ನಡಗಿರೆಲ್ಲರ ಒಳಿತಿನ ಕಟ್ಟಣೆಯ ಕೆಲಸಗಳನ್ನು ಮಾಡಬೇಕು. ಇಂದಿನಂತೆ ಎಲ್ಲರೂ ಹತ್ತಿರ ಬಂದು ಮಾಡುವುದು ಏನೂ ಇಲ್ಲವೆಂಬ ಪರಿಸ್ತಿತಿಯನ್ನೇ ಮುಂದುವರೆಸಿಕೊಂಡು ಹೊರಟರೆ ಜಾತಿಯೆಂಬ ಪಿಡುಗಿಗೆ ಕೊನೆಯಿಲ್ಲ.

ಎಲ್ಲಾ ಜಾತಿಗಳ ಕನ್ನಡಿಗರು ಕೂಡಿ ಮಾಡಬಹುದಾದ ಮತ್ತು ಮಾಡಬೇಕಾದ ಕಟ್ಟಣೆಯ ಕೆಲಸಗಳಲ್ಲಿ ಇಂದು ಬಹಳ ಮುಕ್ಯವಾದುದು ಒಂದಿದೆ. ಅದೇನೆಂದರೆ, ಕನ್ನಡ ನುಡಿಯನ್ನು ಮುಂದಿನ ಕಾಲಕ್ಕೆ, ಮುಂದಿನ ಶತಮಾನಕ್ಕೆ ಅಣಿಯಾಗಿಸುವುದು. ಇದರಲ್ಲಿ ಬರವಣಿಗೆಯನ್ನು ಎಲ್ಲರ ಸೊತ್ತಾಗಿಸುವುದು ಬಹಳ ಮುಕ್ಯವಾದ ಕೆಲಸ.

ಕನ್ನಡ ನುಡಿಯು ಇಲ್ಲಿಯ ವರೆಗೆ ಕನ್ನಡಿಗರೆಲ್ಲರಿಂದಲೂ ಬರೆಯಲ್ಪಡಬೇಕು ಎಂಬುದೇ ಇರಲಿಲ್ಲ. ಕೆಲವು ಮೇಲ್ಜಾತಿಯವರಿಂದ - ಮುಕ್ಯವಾಗಿ ಬ್ರಾಮಣರಿಂದ - ಬರೆಯಲ್ಪಟ್ಟರೆ ಸಾಕು ಎಂಬ ವಾತಾವರಣವಿತ್ತು. ಆದುದರಿಂದ ಬರವಣಿಗೆಯೆಂಬುದು ಮೇಲ್ಜಾತಿಯವರಿಗೆ ಮೀಸಲು ಎಂಬಂತೆ ಬೆಳೆದುಕೊಂಡು ಬಂದಿದೆ. ಕನ್ನಡದ ಬರಿಗೆಮಣೆ (ವರ‍್ಣಮಾಲೆ), ಸೊಲ್ಲರಿಮೆ (ವ್ಯಾಕರಣ), ನಲ್ಬರಹ (ಸಾಹಿತ್ಯ) - ಇವೆಲ್ಲದರಲ್ಲೂ ಇದರ ನೆರಳು ಕಾಣಸಿಗುತ್ತದೆ. ನೂರಕ್ಕೆ ತೊಂಬತ್ತಯ್ದಕ್ಕಿಂತ ಹೆಚ್ಚು ಕನ್ನಡಿಗರ ಆಡುಮಾತಿನಲ್ಲಿ ಇಲ್ಲದ ಮಹಾಪ್ರಾಣ ಮುಂತಾದವು ಸಂಸ್ಕ್ರುತದಿಂದ ಕನ್ನಡದ ಬರವಣಿಗೆಗೆ ಬಂದುಬಿಟ್ಟಿವೆಯಶ್ಟೇ ಅಲ್ಲ, ಅವುಗಳಿಲ್ಲದ ಕನ್ನಡದ ಬರವಣಿಗೆ ಒಳ್ಳೆಯ ಕನ್ನಡವಲ್ಲ ಎಂಬ ಅನಿಸಿಕೆ ತಿಳುವಳಿಕಸ್ತರಲ್ಲೇ ಇದೆ.

ಒಳ್ಳೆಯ ಕನ್ನಡವೆಂದರೆ ಸಂಸ್ಕ್ರುತದ ಪದಗಳಿಂದ ತುಂಬಿ ತುಳುಕುತ್ತಿರುವಂತದ್ದು ಎಂಬ ನಂಬಿಕೆ ಕನ್ನಡಗರಲ್ಲೆಲ್ಲ ಇದೆ. ಕನ್ನಡದ ಸೊಲ್ಲರಿಮೆಯೆಂದರೆ ಸಂಸ್ಕ್ರುತದ ಸೊಲ್ಲರಿಮೆಯ ಒಂದು ಕಳೆಗುಂದಿದ ರೂಪವೆಂಬ ಅನಿಸಿಕೆ ಕನ್ನಡದ ವಿದ್ವಾಂಸರೆನಿಸಿಕೊಂಡವರಲ್ಲೇ ಇದೆ. ಸಾರಾಂಶವಾಗಿ ಹೇಳುವುದಾದರೆ, ಜಾತಿಯೇರ‍್ಪಾಡಿನಿಂದ ಕನ್ನಡವೆಂದರೆ ಯಾವುದು ಎಂಬುದರಲ್ಲೇ ಕನ್ನಡಿಗರಲ್ಲಿ ತಪ್ಪನಿಸಿಕೆಗಳು ಬೇರೂರಿಬಿಟ್ಟಿವೆ.

ಬರವಣಿಗೆಯೆಂಬುದು ಜನಜೀವನದಲ್ಲಿ ಅತಿ ಮುಕ್ಯವಾದ ಪಾತ್ರವನ್ನು ಪಡೆದಿರುವ ಈ ಯುಗದಲ್ಲಿ ಕನ್ನಡದ ಬರವಣಿಗೆಯಿಂದ ಮೇಲಿನ ತೊಂದರೆಗಳನ್ನು ತೆಗೆದುಹಾಕದೆ ಜಾತಿಯೇರ‍್ಪಾಡಿನ ವಿರುದ್ದ ನಿಜವಾದ ಅರ‍್ತದಲ್ಲಿ ಹೋರಾಡಲು ಆಗುವುದಿಲ್ಲ. ಈ ಹಮ್ಮುಗೆಯಲ್ಲಿ ಜಾತಿಯೇರ‍್ಪಾಡಿನ ಎದುರಾಗಿ ಕನ್ನಡಿಗರು ಯಾವುದೋ ತಿಯರಿಯಲ್ಲಿ ಮಾತ್ರ ಒಗ್ಗೂಡಿ ನಿಂತರಾಗುವುದಿಲ್ಲ; ಪ್ರಾಕ್ಟಿಕಲ್ಲಾಗಿ ಒಗ್ಗೂಡಿ ನಿಂತು ಆ ಒಗ್ಗಟ್ಟಿನ ಶಕ್ತಿಯನ್ನು ಬಳಸಬೇಕಾಗುತ್ತದೆ, ಬಳಸಿ ದುಡಿಯಬೇಕಾಗುತ್ತದೆ. ಕನ್ನಡದ ಬರವಣಿಗೆಯಲ್ಲಿ ಆಗಬೇಕಾದ ಈ ಬದಲಾವಣೆಯ ಕಡೆಗೆ ನಾವು ಗಮನ ಹರಿಸದಿದ್ದರೆ ಕನ್ನಡದ ಕೂಡಣವನ್ನು ಜಾತಿಯೇರ‍್ಪಾಡಿನ ಹಿಡಿತದಿಂದ ಬಿಡಿಸುವುದು ಕೂಡ ಬರೀ ತಿಯರಿಯಾಗಿ ಉಳಿಯುವುದರಲ್ಲಿ ಸಂದೇಹವಿಲ್ಲ.

{ಚಿತ್ರ: ವಿಕಿಪೀಡಿಯ}

ಮುಂದೆ ಓದಿ »

6.3.13

ಮಂದಿಯಾಳ್ವಿಕೆಯಲ್ಲಿ ಕನ್ನಡಿಗ: ಸೀಳುನೋಟದ ಸೀಳುನೋಟ!

6.3.13
{’ಮಂದಿಯಾಳ್ವಿಕೆ’ಯಲ್ಲಿ ಕನ್ನಡಿಗ  ಹೊತ್ತಗೆಯನ್ನು ಕುರಿತು ವಿಜಯಕರ್ನಾಟಕದಲ್ಲಿ ಕೆ. ವೆಂಕಟೇಶ ಅವರು ಬರೆದ ಸೀಳುನೋಟಕ್ಕೆ ’ಸಾರುವೆ ಡಂಗುರ’ ಎಂಬ ಮಿಂಬವನ್ನು ನಡೆಸುವ ಸಿದ್ದರಾಜು ವಳಗೆರೆಹಳ್ಳಿ ಬೋರೇಗವ್ಡ ಅವರ ಪ್ರತಿಕ್ರಿಯೆಯನ್ನು ಅವರ ಒಪ್ಪುಗೆಯ ಮೇರೆಗೆ ಯಾಂದಳ್ಳಿಯ ಓದುಗರಿಗಾಗಿ ಹಾಕಲಾಗಿದೆ. - ಕಿ.ಬಾ.}

ಸಿದ್ದರಾಜು ವ. ಬೋರೇಗವ್ಡ.
ಚಿತ್ರ: ಇವರ ಫೇಸ್ಬುಕ್ ಪುಟ.
ಕಿರಣ್ ಬಾಟ್ನಿಯವರ ಮಂದಿಯಾಳ್ವಿಕೆಯಲ್ಲಿ ಕನ್ನಡಿಗ ಎಂಬ ಹೊಸ ಹೊತ್ತಗೆಯ ಸೀಳುನೋಟ ೩-೬-೧೩ರ ವಿಜಯಕರ್ನಾಟಕ ಸುದ್ದಿಯಾಳೆಯಲ್ಲಿ ಅಚ್ಚಾಗಿದೆ. ಹೊಸಬರಹದಲ್ಲಿರುವ ಹೊತ್ತಗೆಯ ಸೀಳುನೋಟ ಎಲ್ಲಕ್ಕಿಂತಲೂ ದೊಡ್ಡ ಸುದ್ದಿಯಾಳೆಯಲ್ಲಿ ಅಚ್ಚಾಗಿದ್ದು ಹೊಸಬರಹದ ಮಟ್ಟಿಗೆ ಒಳ್ಳೆಯ ಬೆಳವಣಿಗೆ. ಆದರೆ ಸೀಳುನೋಟದ ಬರಹಗಾರ ಕೆ. ವೆಂಕಟೇಶ್ರ 'ಹೊತ್ತಗೆಯ ಮತ್ತು ಹೊತ್ತಗೆಯು ಹೇಳುವ ಹಲವು ವಿಚಾರಗಳ ಮೇಲಿನ' ಅನಿಸಿಕೆಗಳನ್ನು ಒರೆಗಚ್ಚಬೇಕಿದೆ.

ಹೊತ್ತಗೆಯಲ್ಲಿರುವ ಹೊಸಬರಹ ಕನ್ನಡಿಗರ ಬೇರೆ ಬೇರೆ ನಾಟಿ ನುಡಿಗಟ್ಟುಗಳಿಗೆ ತಲುಪಲಾಗದ ಬೇರೊಂದು ನಡುಗಡ್ಡೆಯಾಬಹುದು ಎಂಬ ಅನಿಸಿಕೆಯನ್ನು ವೆಂಕಟೇಶ್ ಅವರು ಇಟ್ಟುಕೊಂಡಿರುವಂತಿದೆ. ವೆಂಕಟೇಶ್ ಅವರು ಹೊಸ ನಡುಗಡ್ಡೆಯ ಬಗ್ಗೆ ಆತಂಕ ಪಡಬೇಕಿಲ್ಲ. ಯಾಕೆಂದರೆ, ಕಿರಣ್ ಬಾಟ್ನಿ ಅವರು ಬಳಸುತ್ತಿರುವುದು ಹೆಬ್ಬುಸಿರುಗಳು ಇಲ್ಲದ 'ಹೊಸ ಬರಹ'. ಅವರು ಆಯ್ದುಕೊಳ್ಳುವ ಅಣ್ಣೆಗನ್ನಡದ ಪದಗಳು 'ಎಲ್ಲರ ಕನ್ನಡದವು'. ಅವು ಕರ್ನಾಟಕದ ಎಲ್ಲಾ ಕಡೆಯ, ಎಲ್ಲಾ ಸೊಗಡಿನಿಂದ ಬಂದಂತವು. ಕಿರಣ್ ಅವರ ಬರವಣಿಗೆಯಲ್ಲಿ ಕಿರಣ್ ಅವರದ್ದೇ ಆದ ಸೊಗಡಿರಬಹುದು. ಆದರ ಅವರ 'ಹೊಸ ಬರಹ' ಈಗಿರುವ 'ಹೊರ ಬರಹಕ್ಕೆ' ಹೋಲಿಸಿದರೆ ಎಲ್ಲಾ ಕನ್ನಡಿಗರಿಗೂ ಹತ್ತಿರವಾದುದು. 'ಎಲ್ಲರ-ಕನ್ನಡಕ್ಕೆ' ಎಲ್ಲಾ ಕನ್ನಡಿಗರಿಂದ ಪಡೆಯುತ್ತಿರುವುದರಿಂದ ಅದಕ್ಕೆ ಈಗಾಗಲೇ ಒಳಬಲವಿದೆ. ಇದನ್ನು ಹರಡುವುದಕ್ಕೆ ಅಡೆತಡೆಗಳಿವೆ ದಿಟ. ಪತ್ರಿಕೆಗಳು, ಬರಹಗಾರರುಗಳಿಗೆ ಒಂದೋ ನುಡಿಯರಿಮೆಯ ತಿಳಿವಿಲ್ಲ, ಇಲ್ಲಾ, ಹಳತರ ಮೇಲೆ ಒಲವೆಚ್ಚು. ಕೊನೆಯ ತೀರ್ಮಾನ ಕನ್ನಡಿಗರಿಂದ ಆಯ್ಕೆಯಾದ ಆಳ್ವಿಕೆಯ ಬಳಿಯಿದೆ. ಕಲಿಕೆಯನ್ನ ಹೊಸ ಬರಹ ಮತ್ತು ಎಲ್ಲರ-ಕನ್ನಡದಲ್ಲಿ ತಂದಲ್ಲಿ ಸುದ್ದಿಯಾಳೆಗಳು, ಬರಹಗಾರರು ತಾವಾಗೇ ಬದಲಾಗುತ್ತಾರೆ. 'ಎಲ್ಲರ-ಕನ್ನಡವು' ಅರಿಮೆಯ ಅಡಿಪಾಯದ ಮೇಲೆ ನಿಂತಿದೆ. ಆದರೂ, ಅದು ಸಂಸ್ಕ್ರುತ ಕನ್ನಡಕ್ಕಿಂತ ಎಲ್ಲಾ ಬಗೆಯ ಬಳಕೆಯಲ್ಲೂ ಮಿಗಿಲಾದುದು ಎಂದು ಸಾದಿಸಿ ತೋರಿಸಬೇಕಾದ ಹೊಣೆ 'ಎಲ್ಲರ-ಕನ್ನಡ'ದ ಆರಂಬಿಕ ಬರಹಗಾರರ ಮೇಲಿದೆ ಎಂಬುದೂ ದಿಟವೇ.

ಕನ್ನಡವನ್ನ ಎಲ್ಲಾ ಮಾಳಗಳ ಕಲಿಕೆಯ ಮತ್ತು ಎಲ್ಲಾ ತಿಳುವಳಿಕೆಯ ಒಯ್ಯುಗೆಯಾಗಿ ಬೆಳೆಸುವುದರ ಬಗ್ಗೆ ವೆಂಕಟೇಶ್ ಅವರ ಎಚ್ಚರಿಕೆ ದಿಗಿಲು ಹುಟ್ಟಿಸುವಂತವು. ಮಾಂಜರಿಮೆ, ಬಿಣಿಗೆಯರಿಮೆ, ಕೂಡಣದರಿಮೆ, ಹಣಕಾಸರಿಮೆ, ಕಟ್ಟಡದರಿಮೆ ಮುಂತಾದುವುಗಳಲ್ಲಿ ಕನ್ನಡದ ಬದುಕು ಹಿಂದಿನಿಂದ ಕಟ್ಟಿಕೊಂಡ ತಿಳುವಳಿಕೆ ಇದೆಯೇ, ಯಾವುದೇ ತಿಳಿವು ನಮಗೆಶ್ಟು ಬಳಕೆಗೆ ಬರಬಲ್ಲದು ಎಂದು ಕೇಳಿಕೊಳ್ಳಬೇಕು ಎನ್ನುತ್ತಾರೆ ವೆಂಕಟೇಶ್! ಮುಂದುವರಿದು, ಎಲ್ಲಾ ತಿಳುವಳಿಕೆಗಳನ್ನು ಕನ್ನಡದ ಒಯ್ಯುಗೆಯಲ್ಲಿ ತರಬೇಕು ಅನ್ನುವುದು ಕನ್ನಡದ ಮೇಲ್ಮೆಯನ್ನು ಎತ್ತರಿಸುವಂತೆ ಕಂಡರೂ ಕನ್ನಡದ ಸತ್ವವನ್ನು ಕುಗ್ಗಿಸಿ ಕೊನೆಯವರೆಗೂ ಕನ್ನಡವನ್ನ ಬೇಡುವ ನೆಲೆಯಲ್ಲಿ ಇರಿಸುತ್ತದೆ ಎನ್ನುತ್ತಾರೆ! ಇರುವುದೆನೆಂದರೆ, ನುಡಿಯರಿಮೆಗಾರರು ಕಂಡುಕೊಂಡಿರುವ ತಾಯ್ನುಡಿ ಮತ್ತು ಆ ನುಡಿಯಾಡುವವರ ನಂಟಿನ ಬಗ್ಗೆಯ ತಿಳಿವಳಿಕೆ ಸಿಕ್ಕಲಾದುದ್ದೇನಲ್ಲ. ಒಂದು ನುಡಿಯಾಡುವವರು ಅರಿವನ್ನು ಕಲಿತುಕೊಳ್ಳುವುದಕ್ಕೆ(ಕಲಿಕೆ), ಕಂಡುಕೊಳ್ಳುವುದಕ್ಕೆ(ಅರಕೆ), ಹಂಚಿ-ಹರಡಿಕೊಳ್ಳುವುದಕ್ಕೆ(ಹಬ್ಬುಗೆ) ತಾಯ್ನುಡಿಯ ಒಯ್ಯುಗೆಯೇ ಸುಳುವಾದ ಹಾದಿ. ಇದೇ ಏಳಿಗೆಯ ನಾಡು ಕಟ್ಟುವುದರ ಒಳಗುಟ್ಟು.

ಇನ್ನು ವೆಂಕಟೇಶ್ ಅವರು ಹೆಸರಿಸಿದ ಅರಿವಿನ ಮಾಳಗಳ ತಿಳುವಳಿಕೆಗಳು ಹೆಚ್ಚಾಗಿ ನಾಡಿನ ಹೊರಗೆ ಹುಟ್ಟಿ ಬಳಕೆಯಾದವು ಎಂಬುದು ಅವರ ಕೊಂಕುನುಡಿಯ ಸಲುವಿರಬೇಕು. ಯಾವುದೇ ತಿಳಿವು ನಮಗೆಶ್ಟು ಬಳಕೆಯಾಗಬಲ್ಲದು ಎಂದು ಕೇಳುವುದು ಹುರಳಿಲ್ಲದ ಕೇಳ್ವಿ. ಯಾವುದೇ ತಿಳಿವಿನ ಬಳಕೆ ಇದ್ದೇ ಇದೆ. ನುಡಿ ಬಳಸಿ ನಾಡು ಕಟ್ಟುವುದೇ ಆದಲ್ಲಿ ಕನ್ನಡಿಗರು ತಮಗೆ ಯಾವ ತಿಳಿವುಗಳು ಮೇಲ್ಮೆಯವು, ಆತುರದಲ್ಲಿ ಬೇಕಿರುವುವು ಎಂದು ಕಂಡುಕೊಳ್ಳಬೇಕಾಗುತ್ತದೆ ದಿಟ. ಆ ತಿಳಿವುಗಳನ್ನು ಮೊದಲು ಕಲಿತುಕೊಳ್ಳಬೇಕಾಗುತ್ತದೆ ದಿಟ. ಅದರೆ, ಎಲ್ಲಾ ಮಾಳಗಳಲ್ಲಿಯೂ ಕನ್ನಡಿಗರು ಕಲಿಯುವುದಂತೂ ಇದ್ದೇ ಇದೆ. ಕನ್ನಡಿಗರ ಏಳಿಗೆಗೆ ಬೇಕಾದ ತಿಳಿವು ಕನ್ನಡದಲ್ಲಿ, ಕನ್ನಡಿಗರಲ್ಲಿ ಈಗಾಲೇ ಇಲ್ಲವೇ ಎಂದು ಕೇಳಿಕೊಳ್ಳಬೇಕು ದಿಟ. ಎತ್ತುಗೆಗೆ, ಕರ್ನಾಟಕದ ಹಳ್ಳಿಗಳ ಪರಿಸರಕ್ಕೆ ತೊಟ್ಟಿಮನೆಗಳು ತಕ್ಕುದಾದವು. ಬೇಸಿಗೆಯಲ್ಲಿ ತಂಪಾಗಿಯೂ, ಚಳಿಗಾಲದಲ್ಲಿ ಬೆಚ್ಚಗೂ ಇರುತ್ತವೆ. ಗಾಳಿಯಾಟ ಸರಾಗವಾಗಿರುತ್ತದೆ. ಅತಿ ಮಳೆಯಾಗುವ ಮಲೆನಾಡಿನಲ್ಲೂ ಹೆಚ್ಚುಕಾಲ ಬಾಳಿಕೆ ಬರುತ್ತವೆ. ಕನ್ನಡಿಗರು ಸಿಮೆಂಟಿನ ಸೂರಿನ ಮಹಡಿಮನೆಗಳನ್ನು ಕಟ್ಟಲು ಆರಂಬಿಸಿದ ಮೇಲೆ ತೊಂದರೆಗಳೇ ಹೆಚ್ಚಾಗಿವೆ. ಸೆಕೆ, ಕಡಿಮೆ ಗಾಳಿ, ಮತ್ತದು ತರುವ ರೋಗಗಳು, ಹೆಚ್ಚು ವೆಚ್ಚವಾಗುವ ಮಿಂಚು, ಮಹಡಿ ಮನೆಯ ಕಡಿಮೆ ಬಾಳಿಕೆ ಮುಂತಾದುವುಗಳೂ ಸೇರಿವೆ. ಹಾಗೆಂದ ಮಾತ್ರಕ್ಕೆ ಇವತ್ತಿನ ಕಾಲದ ಮುಂದುವರೆದ ಬಹುಮಹಡಿ ಕಟ್ಟಡದ ತಿಳುವಳಿಕೆ, ನಗರ ಕಟ್ಟಣೆಯ ಹಮ್ಮುಗೆ ಕನ್ನಡಿಗರಲ್ಲೇ ಪೂರ್ತಿ ಇತ್ತು ಅಂದುಕೊಳ್ಳುವುದು ತಪ್ಪಾದೀತು.

ಮಿಗಿಲಾಗಿ, ಕನ್ನಡದ ಒಯ್ಯುಗೆಯಲ್ಲಿ ಕಟ್ಟುವಿಕೆಯನ್ನು ತರಬೇಕನ್ನುವುದು ಎಲ್ಲವನ್ನೂ ಬೇರೆಡೆಯಿಂದ ತಂದುಕೊಳ್ಳಬೇಕೆಂಬ ಸಲುವಿಗಲ್ಲವೇ ಅಲ್ಲ. ಮೊದಲೇ ಹೇಳಿದ ಹಾಗೆ, ತಿಳಿವನ್ನು ಕಲಿತುಕೊಳ್ಳಲು, ಕಂಡುಕೊಳ್ಳಲು, ಹರಡಲು ಸರಾಗವಾತ್ತದೆ ಎಂಬ ಕಾರಣಕ್ಕೆ. ಆ ತಿಳಿವು ಅರಿಮೆಯದಾಗಿರಬೇಕು ಅಶ್ಟೇ. ಎಲ್ಲಿ ಹುಟ್ಟಿತು, ಎಲ್ಲಿಂದ ಬಂದಿತು ಅನ್ನುವುದು ಮೇಲ್ಮೆಯದಾಗುವುದೇ ಇಲ್ಲ. ತಿಳಿವು ಅರಿಮೆಯದಾದರೆ, ಕನ್ನಡಿಗರಿಗೆ ಬಳಕೆಯಾಗೇ ಆಗುತ್ತದೆ. ಗಮನಿಸಿ, ಹೆಂಚಿನ ತೊಟ್ಟಿಮನೆಗಳು ಕನ್ನಡದ ಹಳ್ಳಿಗಳಿಗೆ ಸರಿ ಅನ್ನುವುದೇ ಅರಿಮೆಯ ತಿಳಿವು. ಬೆಂಗಳೂರಿನಂತಾ ದಟ್ಟ ಮಂದಿತಿಣ್ಮೆಯ ಪೊಳಲುಗಳಿಗೆ ಹಲಮಹಡಿಗಳು ಸರಯೆಂಬುದೇ ಅರಿಮೆಯ ತಿಳಿವು. ಕನ್ನಡದಲ್ಲಿ ಕಟ್ಟಡದರಿಮೆಯನ್ನು ತಂದಲ್ಲಿ 'ಅರಿಮೆಯ ತಿಳಿವು' ಅರಿಮೆಯ ತಿಳಿವಾಗೇ ಇರುತ್ತದೆ. ಅದನ್ನು ಕಲಿಯುವುದೂ, ಹೊಸದನ್ನು ಕಂಡುಕೊಳ್ಳುವುದೂ, ಮತ್ತು ತಿಳಿವನ್ನು ಹರಡುವುದು ಮಾತ್ರ ಇಂಗ್ಲಿಶ್ ಒಯ್ಯುಗೆಗೆ ಹೋಲಿಸದರೆ ಸರಾಗವಾಗತ್ತದೆ. ಕೇವಲ ನಲವತ್ತು ವರುಶಗಳ ಹಿಂದೆ ಕರ್ನಾಟಕಕ್ಕಿಂತಲೂ ಹಿಂದುಳಿದಿದ್ದ ತೆಂಕಣ-ಕೊರಿಯಾ ನಾಡನ್ನು ನೋಡಿ ತಿಳಿದುಕೊಳ್ಳಬಹುದು. ತಾಯ್ನುಡಿಯ ಒಯ್ಯುಗೆಯಲ್ಲೇ ಎಲ್ಲವನ್ನೂ ತಂದುಕೊಂಡ ಕೊರಿಯನ್ನರು ಸತ್ವವನ್ನು ಕಳೆದುಕೊಂಡು ಕೊನೆಯವರೆಗೂ ಬೇಡುವ ನೆಲೆಯಲ್ಲಿ ಕಳೆದುಹೋಗಿಲ್ಲ. ಬದಲಾಗಿ, ಹುರುಪಿನಿಂದ ಇಡೀ ನೆಲಕ್ಕೇ ಹಲವಾರು ಕೊಡುಗೆಗಳನ್ನು ಕೊಡುತ್ತಿದ್ದಾರೆ!

ಹೊರಗಿನ ತಿಳುವಳಿಕೆಗಳ ಬಗ್ಗೆ ಹೆಚ್ಚರ ತೋರುವ ವೆಂಕಟೇಶ್ ಅವರು ರಾಶ್ಟ್ರೀಯ ಪಕ್ಶಗಳ ಮತ್ತು ಹೊರಗಿನ ವರಿಶ್ಟರ ತಿರಸ್ಕಾರವನ್ನ ಮಾತ್ರ ಅದಶ್ಟಾಗೇ ಬರಮಾಡಿಕೊಳ್ಳುವುದಿಲ್ಲ! ಜೊತೆಗೆ ಕಿರಣ್ ಅವರು ಪ್ರಾದೇಶಿಕ ಪಕ್ಶಗಳ ಹುರಿಯಾಳುಗಳ ಜಾತೀಯತೆ, ಸಂಪತ್ತು ಲೂಟಿ (ಗಣಿ!) ಮುಂತಾದುವುಗಳ ಬಗ್ಗೆಯೂ ಬರೆದು ತಕ್ಕಡಿ ತೂಗಬೇಕಿತ್ತು ಅಂದುಕೊಳ್ಳುತ್ತಾರೆ. ಹೊತ್ತಗೆಯನ್ನು ಓದಿದರೆ ಅದರ ಬರಹಗಾರರು ರಾಶ್ಟ್ರೀಯ ಪಕ್ಶಗಳನ್ನ ರಾಶ್ಟ್ರೀಯ ಪಕ್ಶಗಳು ಎಂಬ ಸಲುವಿಗೇ ತಿರಸ್ಕರಿಸುತ್ತಾರೆ ಎಂದು ತಿಳಿಯುವುದು ಕಶ್ಟವೇನಲ್ಲ. ಮಿಗಿಲಾಗಿ, ಜಾತೀಯತೆ, ಸೊಮ್ಮು ಲೂಟಿಯಂತ ಪಿಡುಗುಗಳಲ್ಲೂ ರಾಶ್ಟ್ರೀಯ ಪಕ್ಶಗಳ ಕಯ್ಯೇ ಮೇಲು! ರಾಶ್ಟ್ರೀಯ ಪಕ್ಶಗಳ ಬದಲು ಯಾವುದನ್ನು ಕಟ್ಟಿಕೊಳ್ಳಬೇಕು ಎಂಬ ಕೇಳ್ವಿಗೆ ಬಗೆಹರಿಕೆಯೇ ಕನ್ನಡ-ಕನ್ನಡಿಗ-ಕರ್ನಾಟಕ ಕೇಂದ್ರಿತ ಪಕ್ಶಗಳು. ಇದು ಹೊತ್ತಗೆಯ ಸಾರ. ಬ್ಲಾಗ್ ಬರಹಗಳ ಕಂತೆಯಾದ ಹೊತ್ತಗೆಯ ಬೇರೆಡೆಯಲ್ಲಿ ಮಬ್ಬಿದ್ದೀತು. ಕನ್ನಡಿಗರಿಗೆ ಯಾವ ಪಕ್ಶ ಬೇಕು ಎಂಬುದರಲ್ಯಾವ ಮಬ್ಬೂ ಇಲ್ಲ! ಮಿಗಿಲಾಗಿ, ಕೆಟ್ಟದ್ದನ್ನು ತಿರಸ್ಕರಿಸುವುದು ಮೊದಲ ಹೆಜ್ಜೆ!

ಮುಂದೆ ಓದಿ »

4.3.13

ಈಗಿರುವುದು ರಿಪಬ್ಲಿಕ್ಕೇ, ಆದರೆ ವಿಚಿತ್ರವಾದುದು!

4.3.13


ಇತ್ತೀಚೆಗೆ ಹೊರಬಂದಿರುವ ’ಮಂದಿಯಾಳ್ವಿಕೆ’ಯಲ್ಲಿ ಕನ್ನಡಿಗ ಎಂಬ ಹೆಸರಿನ ನನ್ನ ಹೊತ್ತಗೆಯ ಸೀಳುನೋಟವೊಂದನ್ನು ದಿನಾಂಕ 3-6-2013ರ ವಿಜಯಕರ್ನಾಟಕದಲ್ಲಿ ಕಂಡು ಸಂತಸವಾಯಿತು. ವಿಜಯಕರ್ನಾಟಕ ಪತ್ರಿಕೆಗೆ ನನ್ನಿಯನ್ನು ಸಲ್ಲಿಸುತ್ತ, ಕೆ. ವೆಂಕಟೇಶ ಅವರು ಬರೆದ ಆ ಬರಹವು ಎತ್ತಿರುವ ಕೆಲವು ಪ್ರಶ್ನೆಗಳಿಗೆ ಉತ್ತರವನ್ನು ಕೊಡಲು ಪ್ರಯತ್ನಿಸುತ್ತೇನೆ.

’ಕನ್ನಡ ರಿಪಬ್ಲಿಕ್’ ಒಂದನ್ನು ಕಟ್ಟುವ ಬಗ್ಗೆ ಯಾರೂ ಕನವರಿಸಬೇಕಿಲ್ಲ. ಕರ್ನಾಟಕದಲ್ಲಿ ಈಗೇನು ಅರಸಾಳ್ವಿಕೆಯಿದೆಯೇ? ಆಳುವವರನ್ನು ಆಯ್ದುಕೊಳ್ಳಲು ಕರ್ನಾಟಕದ ಮಂದಿ ವೋಟು ಹಾಕುತ್ತಿಲ್ಲವೇ? ಆದುದರಿಂದ ’ಕನ್ನಡ ರಿಪಬ್ಲಿಕ್’ ಈಗಾಗಲೇ ಇದೆಯೆನ್ನಬಹುದು. ಆದರೆ ಇದು ಒಂದು ವಿಚಿತ್ರವಾದ ರಿಪಬ್ಲಿಕ್ಕು. ಇದರಲ್ಲಿ ನಾವು ಆರಿಸಿ ಕಳುಹಿಸಿದ ಪ್ರತಿನಿದಿಗಳು ನಮ್ಮನ್ನು ಹೆಸರಿಗೆ ಮಾತ್ರ ಆಳುವುದು. ನಿಜವಾಗಿ ಆಳುವವರು ನೂರಕ್ಕೆ ತೊಂಬತ್ತಯ್ದರಶ್ಟು ಹೆರವರಾಗಿದ್ದು, ದೆಹಲಿಯ ಪಾರ್ಲಿಮೆಂಟಿನಲ್ಲಿ ಕುಳಿತಿದ್ದಾರೆ. ಈ ರಿಪಬ್ಲಿಕ್ಕಿನಲ್ಲಿ ಪಬ್ಲಿಕ್ಕಾದ ನಮ್ಮ ನುಡಿಗೆ ಬೆಲೆಯಿಲ್ಲ; ಇರುವುದು ದೂರದ ಬಡಗಣದವರ ಹಿಂದಿಗೆ. ಈ ರಿಪಬ್ಲಿಕ್ಕಿನಲ್ಲಿ ನಮ್ಮ ಪ್ರತಿನಿದಿಗಳು ನಮ್ಮ ಹಿತವನ್ನು ಕಾಯಬೇಕಿಲ್ಲ, ಯಾರೋ ಒಬ್ಬ ಕಾಲ್ಪನಿಕ ’ಬಾರತೀಯ’ನ ಹಿತ ಕಾಯುತ್ತಿದ್ದೇನೆಂದು ಹೇಳಿಕೊಂಡರೆ ಸಾಕು. ಇದೆಲ್ಲವೂ ಬದಲಾಗದೆ ಕನ್ನಡಿಗನಿಗೆ ಏಳಿಗೆ ಹಾಗಿರಲಿ, ಉಳಿಗಾಲವೇ ಇಲ್ಲ. ಇದೆಲ್ಲವನ್ನೂ ಬದಲಾಯಿಸುವುದು ಹೇಗೆಂಬ ಮಾತು ಬೇರೆ; ಅದರ ಬಗ್ಗೆ ನನ್ನ ಹೊತ್ತಗೆಯಲ್ಲಿ ಹೆಚ್ಚಿಗೆಯೇನೂ ಇಲ್ಲವೆಂಬುದು ನಿಜ. ಆದರೆ ಒಂದು ಹೊತ್ತಗೆಯಲ್ಲಿ, ಮತ್ತು ಒಬ್ಬನೇ, ಎಲ್ಲವನ್ನೂ ಬರೆಯಲಾಗುವುದಿಲ್ಲ.

ಕನ್ನಡಿಗರು ಒಟ್ಟಾಗಿ ಮಾತ್ರವಲ್ಲ, ಕನ್ನಡನಾಡಿನೊಳಗೆ ಪ್ರತಿಯೊಬ್ಬ ಬಿಡಿಯಾಳೂ ತನ್ನ ಆಳ್ವಿಕೆಯನ್ನು ತಾನೇ ಮಾಡಿಕೊಳ್ಳುವಂತಹ ನಾಳೆಯನ್ನು ಕೂಡ ನಾನು ಬಯಸುತ್ತೇನೆ. ಇದನ್ನೇ ಸಂಸ್ಕ್ರುತದಲ್ಲಿ ಸ್ವಾತಂತ್ರ್ಯ ಎನ್ನುವುದು. ಆದರೆ ಈ ಪದಕ್ಕೆ ಬೇರೆಯೇ ಒಂದು ಹುರುಳು ಅಂಟಿಕೊಂಡಿದ್ದು, 1947ರಲ್ಲಿ ಅದು ನಮಗೆ ಬಂತೆಂದು ಹೇಳಲಾಗುತ್ತದೆ. ಹಾಗಾದರೆ ನಮಗೆ ಇನ್ನೂ ಬಾರದೆ ಇರುವುದಕ್ಕೆ ಏನನ್ನುವುದು? ಅದಕ್ಕೆ ಬೇರೊಂದು ಪದವನ್ನು ಕೊಡಬೇಕಾಗುತ್ತದೆ. ಅದನ್ನು ನಾನು ತನ್ನಾಳ್ವಿಕೆ ಇಲ್ಲವೇ ನಮ್ಮಾಳ್ವಿಕೆ ಎಂದು ಕರೆದಿದ್ದೇನೆ. ಹೀಗೆ ಹೊಸ ಪದಗಳನ್ನು ನನ್ನ ಹೊತ್ತಗೆಯಲ್ಲಿ ಬಳಸಿರುವುದು ಬರೇ ’ವೀರ ಸಂಕಲ್ಪ’ ಇಲ್ಲವೇ ’ಅಕಾಡೆಮಿಕ್ ಕಸರತ್ತ’ಲ್ಲ; ಅದಕ್ಕೆ ಆಳವಾದ ಕಾರಣಗಳಿವೆ. ’ವೀರ ಸಂಕಲ್ಪ’ ಮತ್ತು ’ಅಕಾಡೆಮಿಕ್ ಕಸರತ್ತ’ನ್ನು ನಾನು ಮಾಡೇ ಇಲ್ಲವೆನ್ನುತ್ತಿಲ್ಲ, ಮಾಡಿದ್ದೇನೆ. ಆ ಹಕ್ಕು ನನಗಿದೆಯೆಂದೂ, ಅದರಿಂದ ಓದುಗರು ತಾವೂ ಪ್ರೇರಿತರಾಗಿ ಅಚ್ಚಗನ್ನಡದ ಪದಗಳನ್ನು ಕಟ್ಟಲು, ಅವುಗಳಾಗಲೇ ಇರುವಾಗ ಹಿಂಜರಿಕೆಯಿಲ್ಲದೆ ಬಳಸಲು, ಮತ್ತು ಇದರಲ್ಲಿ ಸಿಗುವ ಮಾಡುಗತನದಲ್ಲಿ ಮೆರೆಯಲು ಮುಂದಾಗುವರೆಂದು ನಂಬಿದ್ದೇನೆ. ಹೆಚ್ಚು-ಕಡಿಮೆ ಇದೇ ಗುರಿ ವೆಂಕಟೇಶ ಅವರು ತಿಳಿಸಿರುವ ’ಕರ್ನಾಟಕ ಓದು’ ಚಳುವಳಿಗೂ ಇದೆಯೆಂದು ತಿಳಿದು ಸಂತಸವಾಯಿತು.

ಇನ್ನು, ಕನ್ನಡದ ಮೂಲಕ ಏನು ಬರಬೇಕು, ಏನು ಬರಬಾರದು, ಮತ್ತು ಯಾವುದರಿಂದ ಎಶ್ಟು ಪ್ರಯೋಜನ ಎಂದು ಒಬ್ಬರು ತೀರ್ಮಾನಿಸುವಂತದ್ದಲ್ಲ. ಎತ್ತುಗೆಗೆ, ನನಗೆ ಕೆಮಿಸ್ಟ್ರಿ ಕನ್ನಡಕ್ಕೆ ಬರಬಾರದು, ಅದರಿಂದ ಪ್ರಯೋಜನವಿಲ್ಲ ಎನಿಸಬಹುದು. ಈ ಮಾತನ್ನು ಕೂಡಣದಲ್ಲಿ ನಾನು ಹೇಳಲೂ ಬಹುದು. ಆದರೆ ಅದು ಕನ್ನಡದ ಮೂಲಕ ಬಂದರೆ ಯಾವ ಕನ್ನಡಿಗನಿಗೂ ಎಂದಿಗೂ ಒಳ್ಳೆಯದಲ್ಲವೆಂದು ಹೇಳಲಾಗದು. ಆದುದರಿಂದ, ಕನ್ನಡದಲ್ಲಿ ’ಎಲ್ಲವೂ ಬರಲಿ’ ಎನ್ನುವುದೇ ಸರಿಯಾದ ದಾರಿ, ಮಂದಿಯಾಳ್ವಿಕೆಗೊಪ್ಪುವ ದಾರಿ. ಕನ್ನಡಕ್ಕೆ ಇಂಜಿನಿಯರಿಂಗ್, ಮೆಡಿಕಲ್, ಮುಂತಾದವುಗಳು ಬಂದುಬಿಟ್ಟರೆ ಕನ್ನಡದ ’ನಾಟಿವಿದ್ಯೆ’ಗಳನ್ನು ಯಾರೂ ಕೇಳುವವರು ಇರುವುದಿಲ್ಲ ಎಂಬ ಕಾಳಜಿಯಿಂದ ವೆಂಕಟೇಶ ಅವರು ಕನ್ನಡಕ್ಕೆ ’ಎಲ್ಲವೂ ಬರುವುದು ಬೇಡ’ ಎನ್ನುತ್ತಿರುವರೇನೋ. ಆದರೆ ನಾನು ಆ ನಾಟಿವಿದ್ಯೆಗಳನ್ನೇನು ಕಯ್ಬಿಡಬೇಕು ಎನ್ನುತ್ತಿಲ್ಲ; ಅವುಗಳು ಮಾತ್ರ ಇರುವ ಕನಸಿನ ಜಗತ್ತೊಂದರ ಬಗ್ಗೆ ಕನವರಿಸಿಕೊಂಡು ಕುಳಿತಿಲ್ಲ, ಅಶ್ಟೇ. ನಿಜಕ್ಕೂ ಕನ್ನಡಿಗರು ಇಂಜಿನಿಯರಿಂಗ್, ಮೆಡಿಕಲ್ ಮುಂತಾದಹ ’ನಾಟಿಯೇತರ’ ವಿದ್ಯೆಗಳನ್ನು ಕನ್ನಡದಲ್ಲಿ ಬೆಳೆಸಿದಾಗ ನಾಟಿವಿದ್ಯೆಗಳು ಹೊಸ ರೂಪವನ್ನು ತಾಳುತ್ತವೆಯೇ ಹೊರತು ಅಳಿದುಹೋಗುವುದಿಲ್ಲ. ಅವುಗಳು ಅಳಿದುಹೋಗುತ್ತಿರುವುದು ಈಗ - ಎಂದರೆ ಕನ್ನಡದ ಮೂಲಕ ನಾಟಿಯೇತರ ವಿದ್ಯೆಗಳು ಬರುತ್ತಿಲ್ಲದಿರುವುದರಿಂದ.

ಕೊನೆಯದಾಗಿ, ಸರಳವಾದ ವಿಶಯಗಳನ್ನು ಬಹಳ ಕ್ಲಿಶ್ಟವೆಂದು ಬಣ್ಣಿಸಲಾಗಲಿ, ಸುಲಬವಾಗಿ ತೀರ್ಮಾನಿಸಬಹುದಾದುದನ್ನು ಕೊಂಕಣ ಸುತ್ತಿ ಮಯ್ಲಾರಕ್ಕೆ ಬಂದು ತೀರ್ಮಾನಿಸುವುದಕ್ಕಾಗಲಿ, ತಾವಾಗಿಯೇ ನಿರ್ಣಯಗೊಂಡಿರುವ ವಿಶಯಗಳನ್ನು ಹಾರಿಸಿ ಬಿಡುವುದಕ್ಕಾಗಲಿ, ಕನ್ನಡಪರ ಮತ್ತು ಕನ್ನಡವಿರೋದಗಳ ನಡುವಿನ ಗೆರೆಯನ್ನು ಮಬ್ಬುಮಬ್ಬಾಗಿಸುವುದಕ್ಕಾಗಲಿ, ಕುಸ್ತಿಗೆ ಹೆದರುವ ಪುಕ್ಕಲುತನವನ್ನು ತೋರಿಸಿಕೊಳ್ಳುವುದಕ್ಕಾಗಲಿ, ಸರಿಯೆನಿಸಿದ ಹೊಸದನ್ನು ಹೇಳದೆ ಸರಿಯೆನಿಸದ ಹಳೆಯದನ್ನೇ ಮತ್ತೆ ಹೇಳುವುದಕ್ಕಾಗಲಿ ನನ್ನ ಹೊತ್ತಗೆ ಕಂಡಿತವಾಗಿಯೂ ಹೊರಟಿಲ್ಲ ಎಂದು ಒಪ್ಪುತ್ತೇನೆ. ಅಂದಹಾಗೆ, ಹೊತ್ತಗೆಯ ಬೆಲೆ ಇನ್ನೂರು ರೂಪಾಯಿ, ನೂರಲ್ಲ.

ಮುಂದೆ ಓದಿ »

16.2.13

ಕನ್ನಡ-ಕನ್ನಡಿಗ ಇಲ್ಲವಾದರೆ ‘ರಾಶ್ಟ್ರ’ದ ಏಳಿಗೆ ಬೇಗ

16.2.13

ಮೊನ್ನೆ ದಾರವಾಡದಿಂದ ಬೆಳಗಾವಿಗೆ NH4 (ರಾಶ್ಟ್ರೀಯ ಹೆದ್ದಾರಿ 4) ನಲ್ಲಿ ಹೋಗುವ ಅವಕಾಶ ಒದಗಿ ಬಂತು. ಈ ರಾ.ಹೆ.ಗೆ ನಮ್ಮ ಕಾರಿನ ಚಕ್ರ ತಾಕಿದಾಗಿನಿಂದ ಹೊರಗೆ ಬರುವವ ವರೆಗೂ ನಾನು ಎಲ್ಲಿದ್ದೇನೆ, ಎಲ್ಲಿಗೆ ಹೋಗುತ್ತಿದ್ದೇನೆ, ಎಲ್ಲಿಂದ ಬಂದೆ ಎಂಬ ಕೇಳ್ವಿಗಳಿಗೆ ಉತ್ತರವೇ ಸಿಗದಂತಾಗಿ ಸಣ್ಣಮಟ್ಟದಲ್ಲಿ ‘ಅರಿವಳಿಕೆ’ಯಾದ ಅನುಬವ ನನ್ನದಾಗಿತ್ತು. ಕಾರಣ: ಒಂದು ಕಡೆ ಬಿಟ್ಟು ಇಡೀ ಹೆದ್ದಾರಿಯಲ್ಲಿ ಎಲ್ಲೂ ಕನ್ನಡದ ಬೋರ್ಡಾಗಲಿ ಸಂದೇಶವಾಗಲಿ ಇರಲಿಲ್ಲ. ಎಲ್ಲವೂ ಹಿಂದಿ ಮತ್ತು ಇಂಗ್ಲಿಶಿನಲ್ಲಿ ಮಾತ್ರ. ಹಾಗೆಯೇ, ಅದರಲ್ಲಿ ಓಡಾಡುತ್ತಿದ್ದ ಲಾರಿಗಳು ಮತ್ತು ದೊಡ್ಡ ದೊಡ್ಡ ಕಾರುಗಳೆಲ್ಲವೂ TN, MH ಮತ್ತು NL ನೋಂದಣಿಯವೇ, KA ನೋಂದಣಿಯವು ಏನೇ ಇದ್ದರೂ ಚಿಕ್ಕಪುಟ್ಟ ಕಾರುಗಳು ಇಲ್ಲವೇ ದಾರಿತಪ್ಪಿ ಹೆದ್ದಾರಿಗೆ ಬಂದ ಬಯ್ಕುಗಳು ಮಾತ್ರ. ಇನ್ನು ಸುತ್ತಮುತ್ತಲಿನವರ ಎತ್ತಿನಗಾಡಿಗಳು ಹಾಗೂ ಕಾಲ್ನಡುಗೆಯವರಂತೂ ಇಲ್ಲವೇ ಇಲ್ಲ.

ಹೋಗಲಿ, ಈ ಕನ್ನಡ ಮತ್ತು ಕನ್ನಡಿಗರಿಲ್ಲದ ವಾತಾವರಣ ‘ರಾಶ್ಟ್ರೀಯ’ ಹೆದ್ದಾರಿಗೆ ಮಾತ್ರ ಸೀಮಿತವಾಗಿದೆಯೇ? ಇಲ್ಲ. ಏಕೆಂದರೆ, ಈ ಹೆದ್ದಾರಿಯಲ್ಲಿ ಹರಿದಾಡುತ್ತಿರುವುದು ಕನ್ನಡಿಗರಿಗೆ ಎಟುಕದಂತೆ ಮಾಡಲಾಗಿರುವ (‘ಎಟುಕದ’ ಅಲ್ಲ) ಅದಿಕಾರ ಮತ್ತು ಹಣ ಎಂಬ ಅಸ್ತ್ರಗಳು. ಇವುಗಳನ್ನು ನಿದಾನವಾಗಿ ಹೆದ್ದಾರಿಯ ಅಕ್ಕಪಕ್ಕಗಳಲ್ಲೂ ಬಾರತ ‘ರಾಶ್ಟ್ರ’ ಹರಿದುಬಿಟ್ಟು ಕನ್ನಡ ಮತ್ತು ಕನ್ನಡಿಗರ ಸಾವಿನ ಬಲೆಯನ್ನು ಬೀಸುತ್ತಿದೆ. ಕನ್ನಡ ಮತ್ತು ಕನ್ನಡಿಗರ ಹೇಳ ಹೆಸರಿರದ ದೊಡ್ಡದೊಡ್ಡ ಕಾರ್ಕಾನೆಗಳು ಈ ಹೆದ್ದಾರಿಯ ಇಕ್ಕೆಲಗಳಲ್ಲಿ ಸಾಕಶ್ಟು ಬಂದುಬಿಟ್ಟಿವೆ.

ಈ ಕಾರ್ಕಾನೆಗಳಲ್ಲಿ ಕೆಲಸ ಮಾಡಲು ಬಡಗಣ ಬಾರತದಿಂದ ಕೆಲಸಗಾರರು ಹಿಂಡು ಹಿಂಡಾಗಿ ಬರುತ್ತಿದ್ದಾರೆ. ಅವರಿಗೆ ಸೇವೆ ಮಾಡಲು ದಾರವಾಡದ ರಯ್ಲು ನಿಲ್ದಾಣದಲ್ಲೇ ‘ಎಶ್ಟಪ್ಪ ಬಾಳೇಹಣ್ಣಿಗೆ?’ ಎಂದರೆ ‘ದಸ್ ಕಾ ತೀನ್’ ಎನ್ನುವ ‘ರಾಶ್ಟ್ರಪ್ರೇಮಿ’ಗಳ ಅಂಗಡಿ ಮುಂಗಟ್ಟುಗಳು, ಮತ್ತು ಇನ್ನಶ್ಟು ‘ರಾಶ್ಟ್ರಪ್ರೇಮ’ ಉಕ್ಕಿಬರುವಂತೆ ಮಾಡುವ ದಾರವಾಡದ ಲಯ್ನ್ ಬಜಾರಿನಲ್ಲಿ ಸಿಹಿಸಿಹಿಯಾದ ‘ದಾರವಾಡ ಪೇಡ’ ಮಾರುವ ಟಾಕೂರುಗಳು, ಅಗರವಾಲರು ಮತ್ತು ಮಿಶ್ರಾಗಳು.

ಬಾರತ ‘ರಾಶ್ಟ್ರ’ವು ಕನ್ನಡಿಗನ ಶಸ್ತ್ರಾಸ್ತ್ರಗಳನ್ನು ಬರೆಸಿಕೊಂಡು, ಕಿತ್ತುಕೊಂಡು, ಕಯ್ಕಾಲು ಬಡಿಯುವುದಕ್ಕೂ ಆಗುತ್ತಿಲ್ಲದ ಅವನ ಮೇಲೆ ದಂಡೆತ್ತಿ ಬಂದು ಪ್ರಾಣವನ್ನು ತೆಗೆದುಕೊಳ್ಳುವ ‘ಮಹಾಯುದ್ದ’ವನ್ನು ಈ ರಾ.ಹೆ.ಯಲ್ಲಿ ನೋಡಬಹುದು. ಕರ್ನಾಟಕದಲ್ಲಿ ಕನ್ನಡಿಗರ ಅಳಿವಿಲ್ಲದೆ ಈ ‘ರಾಶ್ಟ್ರ’ಕ್ಕೆ ಏಳಿಗೆಯಿಲ್ಲ ಎಂಬ ಪರಿಸ್ತಿತಿಯಿದೆ. ಏಕೆಂದರೆ, ಇಂದು ನಾಳೆಯಲ್ಲಿ ಈ ಹೆದ್ದಾರಿಯಲ್ಲಿ ಕನ್ನಡಿಗರು ರಾಜಾರೋಶವಾಗಿ ಓಡಾಡಿಕೊಂಡು ಆರ್ತಿಕ ಏಳಿಗೆಯನ್ನು ಹೊಂದಲಾರದಂತೆ ಬಾರತವೇ ನಮ್ಮನ್ನು ನೋಡಿಕೊಂಡಿದೆ.

ಇನ್ನು, ಬಾರತದ ಆರ್ತಿಕ ಏಳಿಗೆಯ ಬಗ್ಗೆ ಚಿಂತಿಸುವವರಿಗೆ ಕರ್ನಾಟಕದ ನೆಲ-ಜಲಗಳನ್ನು ಕನ್ನಡಿಗರಿಗಿಂತ ಕನ್ನಡೇತರರೇ ಹೆಚ್ಚು ಸಮರ್ಪಕವಾಗಿ ಬಳಸಿಕೊಳ್ಳಬಲ್ಲರು, ಆದುದರಿಂದ ಕರ್ನಾಟಕಕ್ಕೆ ಕನ್ನಡೇತರರೇ ಸರಿಯಾದ ವಾರಸುದಾರರು ಎಂಬ ಚಿಂತನೆಯಿದೆ. ಕರ್ನಾಟಕವಾಗಲಿ ಕನ್ನಡಿಗರಾಗಲಿ ಅವರಿಗೆ ‘ಇಲ್ಲ’; ಅವರಿಗೆ ‘ಇರು’ವುದು ಕರ್ನಾಟಕದ ನೆಲ-ಜಲಗಳು ಮತ್ತು ಅದನ್ನು ಆದಶ್ಟು ಬೇಗ ನುಂಗಿಬಿಡಬೇಕೆಂಬ ಹಂಬಲ ಮಾತ್ರ.

ಈ ‘ರಾಶ್ಟ್ರ’ವು ಕಳುಹಿಸುವ ಪ್ರತಿಯೊಂದು ಅಸ್ತ್ರವನ್ನೂ ಕರ್ನಾಟಕದ ಗಡಿಯಲ್ಲೇ ತಡೆಹಿಡಿದು ಹಿಂತಿರುಗಿಸದೆ ಹೋದರೆ ಕನ್ನಡಿಗನು ಕರ್ನಾಟಕದಿಂದ ನಿರ್ನಾಮವಾಗಿ ಹೋಗುತ್ತಾನೆ ಎಂದು ಎಶ್ಟು ಕಿರುಚಿಕೊಂಡು ಹೇಳಲಿ? ಹೀಗಿರುವಾಗಲೂ ಕರ್ನಾಟಕವನ್ನು ಮರೆತು ಬಾರತ ‘ರಾಶ್ಟ್ರ’ದ ಏಳಿಗೆಯ ಬಗ್ಗೆಯೇ ಮಾತನಾಡುವ ಕನ್ನಡಿಗರನ್ನು ಕಂಡು ಅಳಲೋ ನಗಲೋ? ಕನ್ನಡಿಗರಿಗೆ ತಮ್ಮ ಮೇಲೆ ಆಗುತ್ತಿರುವ ಈ ಆಳ್ಮೆಯ ಮತ್ತು ಆರ್ತಿಕ ದಾಳಿಗಳ ಸ್ವರೂಪವೇ ಗೊತ್ತಾಗುತ್ತಿಲ್ಲವೇ?

ಇಶ್ಟೆಲ್ಲ ನಡೆಯುತ್ತಿದ್ದರೂ ಕೇಕೆ ಹಾಕಿಕೊಂಡು ಹಿಂದಿ ಸಿನೆಮ ನೋಡಿಕೊಂಡು ತಮ್ಮ, ತಮ್ಮ ಹಿಂದಿನವರ, ಮತ್ತು ತಮ್ಮ ಮುಂದಿನವರ ಜೀವಗಳನ್ನೆಲ್ಲ ಬಲಿಕೊಡುತ್ತಿರುವ ಕನ್ನಡಿಗರಿಗೆ ಏನು ಹೇಳಲಿ? ದೊಡ್ಡ ದೊಡ್ಡ ಲಾರಿಗಳಲ್ಲಿ ಮತ್ತು ಹೊಳೆಹೊಳೆಯುವ ಕಾರುಗಳಲ್ಲಿ ‘ರಾಶ್ಟ್ರಪ್ರೇಮಿಗಳು’ ಬಂದು ನಮ್ಮನ್ನು ಕೊಲ್ಲಿರಿ ಎಂದು ಕರ್ನಾಟಕವೇ ರಾ.ಹೆ. ಪ್ರಾದಿಕಾರಕ್ಕೆ ಜಾಗವನ್ನು ಬೇರೆ ಬಿಟ್ಟಿಯಾಗಿ ಕೊಡಬೇಕಾಗಿರುವ ಈ ಬಾರತವೆಂಬ ಏರ್ಪಾಡಿನಿಂದ ನಾವು ಬದುಕುಳಿಯುವುದಾದರೂ ಹೇಗೆ?

(ಚಿತ್ರ: panoramio.com)

ಮುಂದೆ ಓದಿ »

4.2.13

ಆರ್ತಿಕ ಬೆಳವಣಿಗೆ ಆಗುತ್ತದೆ, ನಿಜ, ಆದರೆ ಯಾರದು?

4.2.13
ಶ್ರೀ. ದುವ್ವೂರಿ ಸುಬ್ಬರಾವ್, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರು. ಚಿತ್ರ: rediff.com
ಕೇಂದ್ರದ ಬಿಗಿಹಿಡಿತದಲ್ಲಿರುವ ಬೇರೆಲ್ಲ ಸಂಸ್ತೆಗಳಂತೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಏನು ಮಾಡುತ್ತದೆ, ಏಕೆ ಮಾಡುತ್ತದೆ ಎಂದು ನಾವು ಸಾಮಾನ್ಯವಾಗಿ ಕೇಳಲು ಹೋಗುವುದಿಲ್ಲ. ಅಲ್ಲಿ ಕುಳಿತ ಬುದ್ದಿವಂತರು ಏನೋ ಮಾಡುತ್ತಾರೆ, ನಾವು ಮಾಡಿಸಿಕೊಳ್ಳುತ್ತೇವೆ; ಕೆಲವೊಮ್ಮೆ ನರಳುತ್ತೇವೆ, ಕೆಲವೊಮ್ಮೆ ನಲಿಯುತ್ತೇವೆ. ಆದರೆ ಅವರ ಮಾಡುಗತನ ಮತ್ತು ಕನ್ನಡಿಗರ ಮಾಡಿಸಿಕೊಳ್ಳುಗತನಗಳಂತೂ ಕಟ್ಟಿಟ್ಟ ಬುತ್ತಿ ಎಂಬಂತಿದೆ. ಈ ‘ಒಡೆಯ ಮತ್ತು ಆಳಿ’ನ ಮಾದರಿಯ ನಂಟನ್ನು ಅಶ್ಟು ಸುಲಬವಾಗಿ ಬದಲಾಯಿಸಲು ಆಗುವುದಿಲ್ಲ ಎನ್ನುವುದಂತೂ ದಿಟ. ಆದರೆ ನಾವು ಆಳುಗಳಾಗಿ ಮುಂದುವರೆಯುವುದು ಕೂಡ ಸುಲಬವಲ್ಲ, ಏಕೆಂದರೆ ಮುಂದುವರೆಯಲು ನಾವು ಬದುಕಿರುವುದೇ ಸಂದೇಹದ ವಿಶಯವಾಗಿದೆ.

ಕಳೆದ ವಾರ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ, ಸಿ.ಆರ್.ಆರ್. ಮತ್ತು ರಿವರ್ಸ್ ರೆಪೋ ದರಗಳನ್ನು 25 ಅಡಿಯಂಕಿಗಳಶ್ಟು ಕೆಳಗಿಳಿಸಲಿದೆ ಎಂಬ ಸುದ್ದಿ ಹೊರಬಂದಿದೆ. ಈ ಕ್ರಮಗಳಿಂದ ಬ್ಯಾಂಕುಗಳಿಂದ ಸಾಲ ಪಡೆಯುವವರು ಕಡಿಮೆ ಬಡ್ಡಿಯನ್ನು ಕೊಡಬೇಕಾಗುತ್ತದೆ. ಸಾಲ ಪಡೆದುಕೊಳ್ಳಲು ಕಾಯುತ್ತಿರುವವರೆಲ್ಲರಿಗೂ ಇದು ಒಳ್ಳೆಯದೆನಿಸುವುದು ಸಹಜ. ಆದರೆ ಒಟ್ಟಾರೆ ಕನ್ನಡಿಗರಿಗೆ ಇದರಿಂದ ನಿಜಕ್ಕೂ ಒಳಿತಾಗುವುದೇ?

ರಿಸರ್ವ್ ಬ್ಯಾಂಕಿನ ಗವರ್ನರ್ ಆದ ಶ್ರೀ ದುವ್ವೂರಿ ಸುಬ್ಬರಾವ್ ಅವರ ಪ್ರಕಾರ (ಅ) ಒಟ್ಟಾರೆಯಾಗಿ ಬಾರತದಲ್ಲಿ ಹಣದುಬ್ಬರ ಹೆಚ್ಚು-ಕಡಿಮೆ ಹಿಡಿತದಲ್ಲಿದೆ (ಎಂದರೆ ಸರಕುಗಳ ಬೆಲೆಯೇರಿಕೆ ಅಶ್ಟೇನೂ ಆಗುತ್ತಿಲ್ಲ) ಮತ್ತು (ಆ) ಬಾರತದ ಒಟ್ಟಾರೆ ಆರ್ತಿಕ ಬೆಳವಣಿಗೆ ಕುಸಿದಿದೆ. ತಾವು ಮಾಡಲು ಹೊರಟಿರುವ ಬದಲಾವಣಿಗಳಿಂದ ಒಟ್ಟಾರೆ ಬ್ಯಾಂಕೇರ್ಪಾಡಿಗೆ 18,000 ಕೋಟಿ ರೂಪಾಯಶ್ಟು ಹರಿಕೆಯ ಹಣ ಸೇರಿಕೊಳ್ಳಲಿದೆ. ಈ ಹಣವನ್ನು ಬ್ಯಾಂಕುಗಳು ಹಿಂದಿಗಿಂತ ಕಡಿಮೆ ಬಡ್ಡಿ ದರದಲ್ಲಿ ಜನರಿಗೆ ಸಾಲವಾಗಿ ಕೊಡಲಿವೆ. ಆದುದರಿಂದ ಸುದ್ದಿಹಾಳೆಗಳಲ್ಲೆಲ್ಲ ಈ ಸುದ್ದಿಯನ್ನು ಜನರಿಗೆ ಒಳಿತಾಗುವಂತದ್ದು ಎಂದು ಕರೆಯಲಾಗುತ್ತಿದೆ. ಸಾಕಶ್ಟು ಕನ್ನಡಪರವೇ ಆಗಿರುವ ಒಂದು ಪತ್ರಿಕೆ ‘ತಗ್ಗಲಿವೆ ಗ್ರುಹ, ವಾಹನ ಸಾಲದರ’ (ಮನೆಸಾಲ ಎಂದು ಏತಕ್ಕೆ ಕರೆದಿಲ್ಲ ಎಂಬುದು ಬೇರೆಯೇ ಕತೆ) ಎಂದು ಕುಶಿಕುಶಿಯಾಗಿ ಸುದ್ದಿ ಮಾಡಿದೆ.

ಮೊಟ್ಟಮೊದಲಿಗೆ, ಹಣದುಬ್ಬರ ಹಿಡಿತದಲ್ಲಿರುವುದು ಯಾರಿಗೇ ಆದರೂ ಒಳ್ಳೆಯ ಸುದ್ದಿಯೇ ಆಗಿರಬೇಕು ತಾನೇ? ತಿಂಗಳುತಿಂಗಳಿಗೂ ಬೆಲೆ ಏರುತ್ತಲೇ ಇದ್ದರೆ ಅದನ್ನು ಒಳ್ಳೆಯದೆಂದು ನಾವಾರೂ ಕರೆಯುವುದಿಲ್ಲ. ಆದರೆ ಇದರೊಡನೆಯೇ ಆರ್ತಿಕ ಬೆಳವಣಿಗೆ ಕುಸಿದಿದೆ ಎಂದು ಕೂಡ ಸುಬ್ಬರಾಯರು ಹೇಳಿದ್ದಾರೆ. ಅವರ ಮಾಹಿತಿಮೂಲಗಳನ್ನು ನಾನು ಗುಮಾನಿಸಲು ಹೋಗುವುದಿಲ್ಲ, ಆದರೆ ಆರ್ತಿಕ ಬೆಳವಣಿಗೆಯೂ ಆಗಿ ಹಣದುಬ್ಬರವೂ ಕಡಿಮೆಯಾಗುವಂತೆ ಮಾಡಲು ಇವರ ಕಯ್ಯಲ್ಲಿ ಆಗುವುದಿಲ್ಲ. ಬಾರತವು ಅಳವಡಿಸಿಕೊಂಡಿರುವ ಆರ್ತಿಕ ಬೆಳವಣಿಗೆಯ ಮಾದರಿಯಲ್ಲಿ ಹಣದುಬ್ಬರ ಹೆಚ್ಚಿಸಿಯೇ ಆರ್ತಿಕ ಬೆಳವಣಿಗೆಯನ್ನು ಸಾದಿಸಲಾಗುವುದು. ಆದುದರಿಂದ ಬ್ಯಾಂಕೇರ್ಪಾಡಿಗೆ 18,000 ಕೋಟಿ ರೂಪಾಯಿ ಹಣವನ್ನು ಹರಿಸಿ, ಹಣದುಬ್ಬರ ಹೆಚ್ಚಿಸಿ, ಒಡನೆಯೇ ಆರ್ತಿಕ ಬೆಳವಣಿಗೆಯನ್ನು ಸಾದಿಸಲು ರಿಸರ್ವ್ ಬ್ಯಾಂಕ್ ಹೊರಟಿದೆ.

ಹೋಗಲಿ, ಆ 18,000 ಕೋಟಿ ಹೆಚ್ಚಿಗೆ ಹಣದಲ್ಲಿ ಕನ್ನಡಿಗರು ಎಶ್ಟು ಪಡೆದುಕೊಳ್ಳುತ್ತಾರೆ? ಆಗಲಿರುವ ಆರ್ತಿಕ ಬೆಳವಣಿಗೆಯಲ್ಲಿ ಕನ್ನಡಿಗರ ಪಾಲು ಎಶ್ಟಾಗಲಿದೆ? ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾಗೆ ಈ ಕೇಳ್ವಿಗಳೇ ಸರಿಯೆನಿಸುವುದಿಲ್ಲ. ಬಾರತದಲ್ಲಿರುವವರೆಲ್ಲರೂ ಒಂದೇ ಅಚ್ಚಿನಿಂದ ಹೊರಬಂದ ರೊಬೊಟುಗಳಿದ್ದಂತೆ ಅದಕ್ಕೆ. ಆದುದರಿಂದಲೇ ಈ ಇಡೀ ತೀರ್ಮಾನವನ್ನು ಅದು ಮಾಡಲು ಹೊರಟಿರುವುದು ‘ಬಾರತದ ಒಟ್ಟಾರೆ ಹಣದುಬ್ಬರ’ ಮತ್ತು ‘ಬಾರತದ ಒಟ್ಟಾರೆ ಆರ್ತಿಕ ಬೆಳವಣಿಗೆ’ಗಳ ಆದಾರದ ಮೇಲೆ. ಕನ್ನಡಿಗರು ಅನುಬವಿಸುತ್ತಿರುವ ಹಣದುಬ್ಬರವಾಗಲಿ, ಕನ್ನಡಿಗರ ಆರ್ತಿಕ ಬೆಳವಣಿಗೆಗಳಾಗಲಿ ಈ ರಿಸರ್ವ್ ಬ್ಯಾಂಕಿಗೆ ಬೇಕಿಲ್ಲದ  ಮಾಹಿತಿ! ಹೀಗಿರುವಾಗ ಕನ್ನಡಿಗರಿಗೆ ಒಳ್ಳೆಯದಾಗುವಂತೆ ಇವರು ನಡೆದುಕೊಂಡರೆ ಅದು ಆಕಸ್ಮಿಕವಾಗಿಯೇ ಆಗಬೇಕು. ಆದರೆ ಆಕಸ್ಮಿಕವಾಗಿ ಆಗುವುದು ನಮ್ಮ ಏಳಿಗೆಯಲ್ಲ, ಬೀಳಿಗೆ.

ರಿಸರ್ವ್ ಬ್ಯಾಂಕಿನವರು ಇಳಿಸುವ ಬಡ್ಡಿ ದರದಿಂದ ಬ್ಯಾಂಕುಗಳಿಗೆ ಸಿಗಲಿರುವ ಹಣವನ್ನು ಪಡೆದುಕೊಳ್ಳಲು ಕನ್ನಡಿಗರು ಸಾಲ ತೆಗೆದುಕೊಳ್ಳಬೇಕು. ಆದರೆ ಸಾಲದ ಅರ್ಜಿ ಸಲ್ಲಿಸುವ ಪ್ರತಿ ಒಬ್ಬ ಕನ್ನಡಿಗನಿಗೂ ಇಪ್ಪತ್ತು ಕನ್ನಡೇತರರು ಬಾರತದಲ್ಲಿ ಇದ್ದಾರೆ. ಹಾಗಾದರೆ ಸಾಲಕ್ಕೆ ತೆತ್ತಬೇಕಾದ ಬಡ್ಡಿ ಕಡಿಮೆಯಾಗಿದ್ದರ ಲಾಬ ಹೆಚ್ಚಾಗಿ ಕನ್ನಡೇತರರಿಗೇ ಸಿಕ್ಕಿದಂತಾಗಲಿಲ್ಲವೇ? ಕನ್ನಡಿಗರಿಗೂ ಸಿಗುತ್ತದೆ, ನಿಜ. ಆದರೆ ಬಾರತದಲ್ಲಿ ಕನ್ನಡೇತರರು ಒಂದಕ್ಕೆ ಇಪ್ಪತ್ತರಶ್ಟಿದ್ದಾರೆ, ಮತ್ತು ಅವರೆಲ್ಲರಿಗೂ ಕನ್ನಡನಾಡಿಗೆ ಬಂದು, ಸಾಲ ಪಡೆದುಕೊಂಡು, ಆಸ್ತಿ ಮಾಡಿಕೊಳ್ಳುವುದಕ್ಕೂ ಹೆದ್ದಾರಿಗಳನ್ನು ಕೂಡ ಕಟ್ಟಾಗಿದೆ. ಹಲವು ಕನ್ನಡೇತರರು ಕರ್ನಾಟಕದಲ್ಲೇ, ಅದೂ ಬೆಂಗಳೂರಿನಲ್ಲೇ ವಾಸಿಸುತ್ತಿದ್ದಾರೆ. ಅವರೆಲ್ಲರಿಗೂ ಕಡಿಮೆ ಬಡ್ಡಿ ದರದಲ್ಲಿ ಸಾಲವನ್ನು ಕೊಡುವುದರಿಂದ ಕರ್ನಾಟಕವನ್ನು ಅವರು ಕೊಂಡುಕೊಳ್ಳಲು ಸುಲಬ ಮಾಡಿಕೊಟ್ಟಂತಾಗುತ್ತದೆಯಲ್ಲದೆ, ಕನ್ನಡಿಗರಿಗಲ್ಲ.

ಅಲ್ಲದೆ, ಈ 18,000 ಕೋಟಿ ರೂಪಾಯಲ್ಲಿ 95% ಇಲ್ಲವೇ ಹೆಚ್ಚು ಹಣವನ್ನು ಕನ್ನಡೇತರರೇ ಪಡೆದುಕೊಳ್ಳುವುದಂತೂ ಕಂಡಿತ ಎಂದಿರುವಾಗ, ಇವರು ಮಾಡುವ ಆರ್ತಿಕ ಬೆಳವಣಿಗೆಯಿಂದ ಹೆಚ್ಚಲಿರುವ ಹಣದುಬ್ಬರ ಯಾರನ್ನು ಕಾಡುತ್ತದೆ? ಇವರನ್ನು ಕಾಡುತ್ತದೆಯೇ? ಇಲ್ಲ, ಕನ್ನಡಿಗರನ್ನೇ ಹೆಚ್ಚು ಕಾಡುವುದು, ಏಕೆಂದರೆ ಅವರಿಗೆ ಸಿಗಲೇ ಇಲ್ಲವಲ್ಲ, ಈ 18,000 ಕೋಟಿಯಲ್ಲಿ ಸರಿಯಾದ ಪಾಲು? ಆದುದರಿಂದ ರಿಸರ್ವ್ ಬ್ಯಾಂಕಿನ ಈ ಹೆಜ್ಜೆಗಳಿಂದ ಆಗುವುದೇನೆಂದರೆ, ಕನ್ನಡಿಗರು ಒಟ್ಟಾರೆಯಾಗಿ ಹಣದುಬ್ಬರದಿಂದ ತತ್ತರಿಸಿ ಹೋಗುತ್ತಾರೆ, ಮತ್ತು ತಂತಮ್ಮ ಆಸ್ತಿಗಳನ್ನು ಕನ್ನಡೇತರರಿಗೆ ಮಾರಿಕೊಳ್ಳುತ್ತಾರೆ. ಮಾರಿಕೊಂಡಾಗ ಕನ್ನಡೇತರರು ಅದನ್ನು ಕೊಂಡುಕೊಳ್ಳಲು ಹಣವನ್ನು ರಿಸರ್ವ್ ಬ್ಯಾಂಕ್ ಅವರಿಗೆ ಸಾಲವಾಗಿ ಕೊಡುತ್ತದೆ.

ಹೀಗೆ ಕನ್ನಡೇತರರು ಕನ್ನಡನಾಡನ್ನು ಕೊಂಡುಕೊಳ್ಳುವುದನ್ನು ತಡೆಯುವುದು ಈ ಬಾರತವೆಂಬ ಹೆಸರಿನ ‘ರಾಶ್ಟ್ರ’ದಲ್ಲಿ ‘ರಾಶ್ಟ್ರದ್ರೋಹ’ ಎನಿಸಿಕೊಳ್ಳುತ್ತದೆ. ಕನ್ನಡಿಗರು ತಮ್ಮ ತಾಯ್ನಾಡನ್ನು ಕನ್ನಡೇತರರಿಗೆ ಮಾರಿಕೊಳ್ಳಲು ಬಾಯ್ಮುಚ್ಚಿಕೊಂಡು ಬಿಟ್ಟುಬಿಟ್ಟರೆ ಅದೇ ‘ರಾಶ್ಟ್ರಪ್ರೇಮ’. ಈ ‘ರಾಶ್ಟ್ರಪ್ರೇಮ’ವನ್ನು ಮೆರೆಯಿರಿ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಇಂದು ಸಾಲದ ಬಡ್ಡಿ ದರವನ್ನು ಕಡಿಮೆ ಮಾಡಿಸಲು ಹೊರಟಿದೆ. ಇದಕ್ಕೇ ನಾನು ಮೊದಲೇ ಹೇಳಿದ್ದು - ಕೇಂದ್ರದ ತೆಕ್ಕೆಯಲ್ಲಿರುವ ಯಾವ ಸಂಸ್ತೆಯೇ ಆಗಲಿ, ಅದು ಯಾವುದೇ ಹೆಜ್ಜೆಯನ್ನಿಡಲಿ, ಅದರಿಂದ ಇಂದು ಕನ್ನಡಿಗರ ಉಳಿವಿಗೇ ಕುತ್ತಿದೆ. ನಾವು ಎಚ್ಚೆತ್ತುಕೊಂಡು ನಮ್ಮ ಆಳ್ವಿಕೆಯನ್ನು ನಮ್ಮ ಕಯ್ಯಲ್ಲೇ ತೆಗೆದುಕೊಳ್ಳದಿದ್ದರೆ, ಕೇಂದ್ರದ ಈ ಸಂಸ್ತೆಗಳನ್ನು ಮುಚ್ಚಿಸದಿದ್ದರೆ ನಮಗೆ ಉಳಿವಿಲ್ಲ.

ಮುಂದೆ ಓದಿ »

6.9.12

ರಯ್ತರ ತೊಂದರೆಗಳು ಮತ್ತು ಪಟ್ಟಣಿಗರಾದ ನಾವು-ನೀವು

6.9.12
ರಯ್ತರು ಜಮೀನನ್ನು ಕಳೆದುಕೊಳ್ಳುತ್ತಿರುವುದು ನನ್ನಂತೆ ಬೇಸಾಯೇತರ ಕೆಲಸ ಮಾಡುವವರ ಗಮನಕ್ಕೆ ಬಂದಿರುತ್ತದೆ. ಕನ್ನಡದ ಪೇಪರುಗಳಲ್ಲಿ ಇದರ ಬಗ್ಗೆ ಸುದ್ದಿಗಳೇನು ಕಡಿಮೆಯಿರುವುದಿಲ್ಲ. ರಯ್ತರಿಗೆ ಬೇಸಾಯ ಮಾಡಿ ಯಾವ ಲಾಬವೂ ಇಲ್ಲವೆನಿಸಲು ಶುರುವಾಗಿರುವುದೂ ನಮ್ಮಗಳ ಗಮನಕ್ಕೆ ಬಂದಿರುತ್ತದೆ. ಪಟ್ಟಣಗಳಲ್ಲಿ ಕೆಲಸ ಮಾಡಿ ಕಯ್ತುಂಬ ಹಣವಿಟ್ಟುಕೊಂಡು ಹಳ್ಳಿಗಳಿಗೆ ಹೋಗಿ ನಮ್ಮಲ್ಲಿಯೇ ಕೆಲವರು 'ಇನ್‌ವೆಸ್ಟ್‌ಮೆಂಟ್'ಗಾಗಿ ಎಕ್ಕರೆಗಟ್ಟಲೆ ಜಮೀನು ಕೊಂಡುಕೊಂಡು ಏನೂ ಬೆಳೆಯದೆಯೇ, ಇಲ್ಲವೇ ಚೂರು ಪಾರು ಬೆಳೆದುಕೊಂಡು ಇರುವುದೂ ಗಮನಕ್ಕೆ ಬಂದಿರುತ್ತದೆ.

ಆದರೆ ಹೀಗೇ ಮುಂದುವರೆದರೆ ಒಂದು ದಿನ ನಮಗೆ ತಿನ್ನಲು ಅನ್ನವೇ ಇರುವುದಿಲ್ಲ ಎಂದಾಗಲಿ, ಜಮೀನಿನಿಂದ ದೂರವಾದ ರಯ್ತರ ಬೇಸಾಯದ ಅರಿಮೆ ಅವರೊಡನೆಯೇ ಸತ್ತುಹೋದರೆ ನಾವು ಜಮೀನಿನ ಕಾತೆ, ಕಂದಾಯಗಳ ಕಾಗದಗಳನ್ನು ತಿನ್ನಲಾಗುವುದಿಲ್ಲ ಎಂದಾಗಲಿ, ನಮ್ಮಲ್ಲಿ ಹೆಚ್ಚಿನವರ ಗಮನಕ್ಕೆ ಬಂದಿರಲಾರದು. ಏಕೆಂದರೆ, ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮುಳುಗಿರುವಾಗ ಈ ಬಗೆಯ ನಿದಾನವಾಗಿ ಸುತ್ತುವರೆಯುವ ಗಂಡಾಂತರಗಳ ಬಗ್ಗೆ ಅರಿವು ತಾನಾಗಿಯೇ ಮೂಡುವುದಿಲ್ಲ. ಅಲ್ಲದೆ, ಅನ್ನದ ಬೆಲೆ ಎಶ್ಟು ಏರಿದರೂ ಯಾವ ತೊಂದರೆಯೂ ಆಗದಶ್ಟು ಸಂಬಳಗಳು ನಮ್ಮ ಕಯ್ಗಳಲ್ಲಿ ಇರುವುದರಿಂದ ಆ ಕಡೆಗೆ ಗಮನವೇ ಹರಿಯುವುದಿಲ್ಲ.

ಆದರೆ ನಿಜಕ್ಕೂ ನಾವು ಹೀಗೆಯೇ ನಮ್ಮ ನಮ್ಮ ಒಳಿತನ್ನು ಮಾತ್ರ ನೋಡಿಕೊಂಡು ಇದ್ದುಬಿಡುವುದೇ ನಾವು ಮಾಡಬಹುದಾದ ಉತ್ತಮವಾದ ಕೆಲಸವೇನು? ಇದನ್ನು ಮಾಡಲೆಂದೇ ಈ ಬೂಮಿಯಲ್ಲಿ ಎಲ್ಲಿ ಬೇಕಾದರೂ ಹುಟ್ಟಬಹುದಾಗಿದ್ದ ನಾವು ಕರ್ನಾಟಕದಲ್ಲಿ ಹುಟ್ಟಿರಬಹುದೇನು? ನನಗಂತೂ ಹಾಗೆನ್ನಿಸುವುದಿಲ್ಲ. ನಾವು ನಮ್ಮ ಸುತ್ತ ಮುತ್ತ ಏನು ನಡೆಯುತ್ತಿದೆಯೆಂದು ಅರ್ತವಾದರೂ ಮಾಡಿಕೊಳ್ಳಬೇಕು. ಅರ್ತ ಮಾಡಿಕೊಂಡರೆ ತೊಂದರೆ ಬಗೆಹರಿಯುವುದಿಲ್ಲ, ನಿಜ, ಆದರೆ ಬಗೆಹರಿಕೆಯ ಕಡೆಗೆ ಒಂದು ಮುಕ್ಯವಾದ ಹೆಜ್ಜೆಯನ್ನಾದರೂ ಇಟ್ಟಂತಾಗುತ್ತದೆ.

ಇದನ್ನೆಲ್ಲ ಅರ್ತ ಮಾಡಿಕೊಳ್ಳುವುದು ಬಹಳ ಮುಕ್ಯವೇಕೆಂದರೆ, ಒಯ್ಯುಗೆಗಳಲ್ಲಿ (ಮಾದ್ಯಮಗಳಲ್ಲಿ) ರಯ್ತರ ನೋವಿನ ಬಣ್ಣನೆ ಕಾಣಿಸುತ್ತಿದೆಯೇ ಹೊರತು, ಅದರಿಂದ ಬೇಸರಗೊಂಡ ಸುದ್ದಿಗಾರರ ಬೇಜಾರಿನ ಮಾತುಗಳು ಕಾಣಿಸುತ್ತಿದೆಯೇ ಹೊರತು, ಇದಕ್ಕೆಲ್ಲ ಕಾರಣವೇನಿರಬಹುದು ಎಂದು ಆಳವಾದ ಚಿಂತನೆ ಹಾಗಿರಲಿ, ಊಹೆಗಳೂ ಕಾಣಿಸುತ್ತಿಲ್ಲ. ಇಶ್ಟೆಲ್ಲ ನಡೆಯುತ್ತಿದ್ದರೂ ನಮ್ಮಲ್ಲಿ ಹಲವರಿಗೆ ಇದರ ಬಗ್ಗೆಯೆಲ್ಲ ತಲೆ ಕೆಡಿಸಿಕೊಳ್ಳಲು ಸಮಯವಾಗಲಿ ಕಾಳಜಿಯಾಗಲಿ ಇಲ್ಲದಂತಿದೆ. ಎತ್ತುಗೆಗೆ, ಒಂದು ಕಡೆ ಬಾರತದಲ್ಲಿ ಈಗಾಗಲೇ ನೂರಕ್ಕೆ ತೊಂಬತ್ತಯ್ದರಶ್ಟಿರುವ ಕನ್ನಡೇತರರ ಸಂಕ್ಯೆ ಮತ್ತು ಅವರ ಕಯ್ಯಲ್ಲಿರುವ ಒಟ್ಟಾರೆ ಹಣ ಹೆಚ್ಚುತ್ತಲೇ ಇದೆ, ಮತ್ತು ಇನ್ನೊಂದು ಕಡೆ ನಮ್ಮ ರಯ್ತರಿಗೆ ಜಮೀನೆಂದರೆ ಸುಡುಗಾಡೆಂಬ ಅನಿಸಿಕೆ ಹೆಚ್ಚುತ್ತಲೇ ಇದೆ. ಮತ್ತೊಂದು ಕಡೆ ಕರ್ನಾಟಕಕ್ಕೆ ಯಾರು ಬೇಕಾದರೂ ಎಶ್ಟು ಸಂಕ್ಯಯಲ್ಲಿ ಬೇಕಾದರೂ ಬರಬಹುದು, ಇಲ್ಲಿ ಆಸ್ತಿಯನ್ನು ಕೊಂಡುಕೊಳ್ಳಬಹುದು ಎಂದೆಲ್ಲ ಬಾರತ ಸಂವಿದಾನದಲ್ಲಿದೆ. ಮಗದೊಂದು ಕಡೆ ಬಾರತ ಸರ್ಕಾರದ ಬಸಿರುತಡೆಯ ಕಾರ್ಯಕ್ರಮಗಳಿಂದ ಒಟ್ಟಾರೆ ಕನ್ನಡಿಗರ ಮಂದಿಯೆಣಿಕೆಯ ಹೆಚ್ಚಳ ದಿನೇ ದಿನೇ ಕಡಿಮೆಯಾಗುತ್ತಿದೆ. ಇಶ್ಟೆಲ್ಲ ಇರುವಾಗ ಕನ್ನಡದ ನೆಲ ಕನ್ನಡಿಗರ ಕಯ್ಯಲ್ಲೇ ಉಳಿಯುವ ಸಾದ್ಯತೆಗಳೇನು ಬಹಳ ಇಲ್ಲ ಎಂಬ ದಿಟವಾದರೂ ನಮ್ಮನ್ನು ಎಚ್ಚೆತ್ತುಕೊಳ್ಳುವಂತೆ ಮಾಡುತ್ತಿಲ್ಲವೇಕೆ? ಇದಕ್ಕೆಲ್ಲ ಬಗೆಹರಿಕೆಯೇ ಬೇಡವೆಂಬಂತೆ ನಾವೆಲ್ಲರೂ ಒಟ್ಟಾರೆ ಕಯ್ ಕಟ್ಟಿ ಕುಳಿತಿರುವುದೇಕೆ?

ಇದು ಹೀಗೇ ಮುಂದುವರೆಯುವುದು ಸರಿಯಲ್ಲ. ನಾವುಗಳೇ ಈ ವಿಶಯಗಳನ್ನು ಅರಿತುಕೊಳ್ಳಬೇಕು, ತೊಂದರೆಯ ಆಳಕ್ಕೆ ಹೋಗಬೇಕು. ಇಲ್ಲದಿದ್ದರೆ ಆಗುವುದು ಕನ್ನಡಿಗರ ಏಳಿಗೆಯಲ್ಲ, ಬೀಳುಗೆ. ನಮ್ಮ ನಮ್ಮ ಕೆಲಸಗಳಲ್ಲಿ ನಾವು ಸಮಯ ಕೊಡುವುದನ್ನು ಕಡಿಮೆ ಮಾಡಿಯಾದರೂ ಈ ವಿಶಯಗಳ ಬಗ್ಗೆ ತಿಳಿದುಕೊಳ್ಳಬೇಕು, ತಿಳಿದುಕೊಂಡು ಬಗೆಹರಿಕೆಯ ಕಡೆ ಕನ್ನಡದ ಕೂಡಣವನ್ನು ಕರೆದೊಯ್ಯಬೇಕು. ಇಲ್ಲವಾದರೆ ನಾವು ಕರುನಾಡಿನಲ್ಲಿ ಹುಟ್ಟೇನು ಪ್ರಯೋಜನ? ಕನ್ನಡಕ್ಕಾಗಿ ಹಲವಾರು ರೀತಿಯಲ್ಲಿ ಕೆಲಸ ಮಾಡುತ್ತಿರುವ ಪಟ್ಟಣಿಗರೂ ಕೂಡ ರಯ್ತರ ಈ ವಿಶಯವನ್ನು ಹಗುರವಾಗಿ ತೆಗೆದುಕೊಳ್ಳುವಂತಿಲ್ಲ, ಇಲ್ಲವೇ ಬೇರೆ ಬೇರೆ ಸಿದ್ದಾಂತದವರು ಸೂಚಿಸುವುದನ್ನೇ ನಮ್ಮ ರಯ್ತರ ತೊಂದರೆಗಳಿಗೆ ಬಗೆಹರಿಕೆಯೆಂದು ನಂಬುವಂತೆಯೂ ಇಲ್ಲ, ಏಕೆಂದರೆ ನಮ್ಮ ತೊಂದರೆಗಳು ನಮ್ಮವು ಮಾತ್ರ. ರಯ್ತರ ತೊಂದರೆ ಬರೀ ರಯ್ತರದಲ್ಲ, ಕನ್ನಡಿಗರೆಲ್ಲರದು. ಅನ್ನವನ್ನು ಕಡೆಗಣಿಸಿದವರು ಬದುಕಿ ಉಳಿಯುವುದೇ ಇಲ್ಲ ಎಂದು ಹೊಸದಾಗಿ ಹೇಳಬೇಕಿಲ್ಲ. ಹೊಟ್ಟೆಗೆ ಹಿಟ್ಟಿಲ್ಲದೆ ಬದುಕಿ ಉಳಿಯದೆ ಹೋದರೆ ಕನ್ನಡದ ತಾಯಿಯ ಜುಟ್ಟಿಗೆ ಎಂತಹ ಮಲ್ಲಿಗೆಯನ್ನು ಮುಡಿಸಿದರೇನು?

(ಚಿತ್ರ: www.arunshanbhag.com)

ಮುಂದೆ ಓದಿ »

5.9.12

ಕನ್ನಡಿಗನ ಅರ್ಜಿ, ಯಾವನದೋ ಮರ್ಜಿ

5.9.12
ಹೆಚ್ಚು-ಕಡಿಮೆ ಒಂದು ತಿಂಗಳ ಹಿಂದೆ 'ಹಯ್ದರಾಬಾದ್ ಕರ್ನಾಟಕ' ಎಂದು ಇಂದಿಗೂ ಕರೆಯಲಾಗುವ ಕರ್ನಾಟಕದ ಆರು ಜಿಲ್ಲೆಗಳಿಗೆ 'ವಿಶೇಶ ಸ್ತಾನಮಾನ'ವನ್ನು ನೀಡುವ ಬಗೆಗಿನ ಮಸೂದೆಯನ್ನು ಕೇಂದ್ರ ಸಂಸತ್ತಿನಲ್ಲಿ ಚರ್ಚಿಸಲು ಕೇಂದ್ರ ಸಚಿವ ಸಂಪುಟದ ರಾಜಕೀಯ ಸಮಿತಿ ಒಪ್ಪಿಗೆ ನೀಡಿತ್ತು. ನಿನ್ನೆ ಸಂವಿದಾನಕ್ಕೆ ತಿದ್ದುಪಡಿ ಮಾಡಲು ಕೋರಿ ಕೇಂದ್ರ ಸರ್ಕಾರದ ಮನೆ ಆಳ್ಮೆವೀಡು (ಗ್ರುಹ ಮಂತ್ರಾಲಯ) ಸಲ್ಲಿಸಿದ ಅರ್ಜಿಯನ್ನು ಪ್ರದಾನಿ ಮನ್ಮೋಹನ್ ಸಿಂಗ್ ಅವರ ಆಳ್ಮೆಬಳಗ (ಮಂತ್ರಿಮಂಡಲ) ಒಪ್ಪಿಕೊಂಡಿದೆ.

ಈ ಇಡೀ ವಿಶಯದಲ್ಲಿ ಕೇಂದ್ರ ಸರ್ಕಾರದವರ ಕಯ್ವಾಡ ಏತಕ್ಕೆ ಬೇಕಿಲ್ಲವೆಂದೂ, ಅದರಿಂದ ಕನ್ನಡಿಗರ ಮುಂದಿರುವ ಗಂಡಾಂತರವೇನೆಂದೂ ಈ ಹಿಂದೆಯೇ 'ನಮ್ಮ ಜಿಲ್ಲೆಗಳ ಬೆಳವಣಿಗೆಯಲ್ಲಿ ಇವರಿಗೇನು ಕೆಲಸ?' ಎಂಬ ಹೆಸರಿನ ಬರಹದಲ್ಲಿ ಬರೆದಿದ್ದೇನೆ. ಆದುದರಿಂದ ಅದನ್ನು ಮತ್ತೆ ಇಲ್ಲಿ ಬರೆಯಬೇಕಿಲ್ಲ. ಆದರೆ ಇಲ್ಲಿ ಗಮನಿಸಬೇಕಾದುದೇನೆಂದರೆ, ಮಂದಿಗೆ ಅತಿ ಹತ್ತಿರದಲ್ಲಿ ಇರಬೇಕಾದ ಅದಿಕಾರವು ಬಾರತದಲ್ಲಿ ಎಶ್ಟು ದೂರ ಹೋಗಿ ನಿಂತಿದೆ ಎಂಬುದು. ಈ ಸಾಂವಿದಾನಿಕ ತಿದ್ದುಪಡಿಯಿಂದ ಈ ಆರು ಜಿಲ್ಲೆಗಳಲ್ಲಿ ಏನೋ ಅದ್ಬುತಗಳು ಆಗಿಬಿಡುತ್ತವೆ ಎಂದೇನು ನಾನು ನಂಬುವುದಿಲ್ಲ, ಆದರೆ ಹಾಗೆ ಮಾತಿಗಾಗಿ ನಂಬುವುದಾದರೆ ಈ ತಿದ್ದುಪಡಿ ಎಶ್ಟು ಸಮಯ ತೆಗೆದುಕೊಳ್ಳುತ್ತಿದೆ, ನೋಡಿ!

ಈಗಲೂ ಸಂವಿದಾನಕ್ಕೆ ತಿದ್ದುಪಡಿಯೇನು ಆಗಿಲ್ಲ. ಆ ದಿನ ಇನ್ನೂ ದೂರವಿದೆ. ನಿನ್ನೆ ಮನ್ಮೋಹನ್ ಸಿಂಗ್ ಅವರ ಆಳ್ಮೆಬಳಗ ಇದಕ್ಕೆ ಸಯ್ ಎಂದಿದೆಯೇ ಹೊರತು ಇಡೀ ಸಂಸತ್ತು ಸಯ್ ಅಂದಿಲ್ಲ. ಎಂದರೆ, ಕಾಂಗ್ರೆಸ್ ಬಿಟ್ಟು ಬಿಜೆಪಿ ಮುಂತಾದ ಎದುರುಬದಿಗಳು ಇನ್ನೂ ಇದಕ್ಕೆ ಒಪ್ಪಿಗೆ ನೀಡಿಲ್ಲ. ಇವರೆಲ್ಲ ಸೇರಿ 2/3ರಶ್ಟು ಬಹುಮತದಿಂದ ಈ ಬಿಲ್ಲನ್ನು ಪಾಸು ಮಾಡಿದರೆ ಮಾತ್ರ ಸಂವಿದಾನ ಬದಲಾಗುವುದು, ಮತ್ತು ಕರ್ನಾಟಕದ ಆರು ಜಿಲ್ಲೆಗಳ ಜನರ ಮೇಲೆ ಬೀಳಲಿದೆ ಎನ್ನಲಾಗುತ್ತಿರುವ ಸಿರಿಯ ಸುರಿಮಳೆ ಬೀಳುವ ಸಾದ್ಯತೆಯಿರುವುದು.

ತಮಾಶೆಯೇನೆಂದರೆ, ಈಗ ಸಯ್ ಅಂದಿರುವವರಾಗಲಿ, ಇನ್ನು ಮುಂದೆ ಸಯ್ ಅನ್ನಬೇಕಿರುವವರಾಗಲಿ ನೂರಕ್ಕೆ ತೊಂಬತ್ತಯ್ದರಶ್ಟು ಕನ್ನಡೇತರರು! ಈ ಹೆರವರ ಒಪ್ಪಿಗೆಗಾಗಿ ನಾವು ಕಾಯಬೇಕು! ಅಯ್ದು ಮಂದಿ ಕನ್ನಡಿಗರು ತಮ್ಮ ಮನೆಯಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಡಿಗೆ ಒಪ್ಪಿಗೆ ಪಡೆದುಕೊಳ್ಳಲು ತೊಂಬತ್ತಯ್ದು ಮಂದಿ ಹೆರವರ ಮುಂದೆ ದಶಕಗಟ್ಟಲೆ ಕಾಯಬೇಕು! ಇನ್ನು ಆ ತೊಂಬತ್ತಯ್ದು ಹೆರವರಿಗೆ ಇದಕ್ಕೆ ಯಾತಕ್ಕೆ ಸಯ್ ಎನ್ನಬೇಕು, ಯಾತಕ್ಕೆ ಸಯ್ ಎನ್ನಬಾರದು ಎನ್ನುವುದರ ಬಗ್ಗೆ ಎಳ್ಳಿನಶ್ಟೂ ಗಂದವಿಲ್ಲ! ಅವರ ತೀರ್ಮಾನ ಯಾವುದಾದರೂ ಅವರನ್ನು ಪ್ರಶ್ನಿಸುವವರೂ ಯಾರೂ ಇಲ್ಲ! ಅವರ ಮರ್ಜಿಗೆ ಬಂದರೆ ಅನ್ನುತ್ತಾರೆ, ಇಲ್ಲದಿದ್ದರೆ ಇಲ್ಲ. ಹೀಗಿರುವುದರಿಂದಲೇ ಅವರ ಮರ್ಜಿಯನ್ನು ಬೇಕಾದ ಕಡೆಗೆ ಬಾಗಿಸಲು ಲಂಚ ತಿನ್ನಿಸಾಟ-ಗಿನ್ನಿಸಾಟಗಳು ನಡೆಯುವುದು.

ಇದೆಲ್ಲವನ್ನು ಕನ್ನಡಿಗರಿಗೆ ಸಿಕ್ಕಿರುವ ಸ್ವಾತಂತ್ರ್ಯವೆಂದು ಕರೆಯುವವರು ಮುಟ್ಟಾಳರಶ್ಟೆ.

(ಚಿತ್ರ: http://www.thiscrazyweb.com)

ಮುಂದೆ ಓದಿ »

4.9.12

ತತ್ವವಿಲ್ಲದ ಆಳ್ಮೆಗಾರಿಕೆ ನಿಲ್ಲಬೇಕು

4.9.12
ಕಲ್ಲಿದ್ದಲು ಹಂಚಿಕೆಯ ವಿಶಯದಲ್ಲಿ ಕೇಂದ್ರ ಸರ್ಕಾರಕ್ಕೆ ಉಂಟಾಗಿರುವ ನಶ್ಟದ ಪ್ರಕರಣದಲ್ಲಿ ಪ್ರದಾನಮಂತ್ರಿ ಮನ್ಮೋಹನ್ ಸಿಂಗ್ ಅವರು ಬ್ರಶ್ಟರು ಎಂದು ಬಿಜೆಪಿಯವರು ಕರೆದು ಅದೆಶ್ಟು ಸಂತಸ ಪಡುತ್ತಿದ್ದಾರೆ ನೊಡಿ! ಅಕಸ್ಮಾತಾಗಿ ಬಿಜೆಪಿಯವರು ಆಡಳಿತದಲ್ಲಿದ್ದಿದ್ದರೆ ಅವರ ಪ್ರದಾನಮಂತ್ರಿಯನ್ನೂ ಹೀಗೇ ಬ್ರಶ್ಟರೆಂದು ತೋರಿಸಿ ಕಾಂಗ್ರೆಸ್ಸಿನವರು ಸಂತಸ ಪಡುತ್ತಿದ್ದರು. ಇದರಲ್ಲಿ ಸಂದೇಹವೇ ಇಲ್ಲ.

ಈ ಕೇಂದ್ರಸರ್ಕಾರದ ಆಳ್ಮೆಗಾರರಿಗೆ ವಯ್ಯಕ್ತಿಕ ಆರೋಪಗಳ ಮಟ್ಟದಿಂದ ಮೇಲೇರಲೇ ಆಗುತ್ತಿಲ್ಲವಲ್ಲ, ಏಕೆ? ತಮ್ಮ ಆಳ್ಮೆಬದಿಯನ್ನು ಬಿಟ್ಟು ಬೇರೆಯವೆಲ್ಲ ಬ್ರಶ್ಟ ಬದಿಗಳೆಂದು ಎಶ್ಟು ಬೇಗ ಮತ್ತು ಎಶ್ಟು ಸುಲಬವಾಗಿ ತೀರ್ಮಾನಕ್ಕೆ ಬಂದುಬಿಡುತ್ತಾರಲ್ಲ, ಹೀಗೇಕೆ? ಕೇಂದ್ರ ಸರ್ಕಾರದಲ್ಲಿ ಯಾರ ಮೇಲೆ ಬೇಕಾದರೂ ಯಾವಾಗ ಬೇಕಾದರೂ ಬ್ರಶ್ಟಾಚಾರದ ಆರೋಪವನ್ನು ಹೊರೆಸಬಹುದು ಎಂಬ ಪರಿಸ್ತಿತಿಯಿದೆಯಲ್ಲ, ಹೇಗೇಕೆ?

ಚೆನ್ನಾಗಿ ಗಮನಿಸಿ ನೋಡಿದರೆ ಗೊತ್ತಾಗುತ್ತದೆ, ಕೇಂದ್ರದಲ್ಲಿ ಆಡಳಿತಕ್ಕೆ ಬರಲು ಹಂಬಲಿಸುತ್ತಿರುವ ಯಾವ ಆಳ್ಮೆಬದಿಗಳೂ ಯಾವುದೇ ತತ್ವಗಳ ಆದಾರದ ಮೇಲೆ ತಮ್ಮ ಆಳ್ಮೆಗಾರಿಕೆಯನ್ನು ನಿಲ್ಲಿಸಿಲ್ಲ ಎಂದು. ನಿಜಕ್ಕೂ ತತ್ವಗಳ ಆದಾರದ ಮೇಲೆ ಈ ಆಳ್ಮೆಬದಿಗಳು ನಿಂತಿದ್ದರೆ ಆ ತತ್ವಗಳ ಬಗ್ಗೆ ಚರ್ಚೆಗಳು ನಡೆಯಬೇಕಿತ್ತು; ಹೆಚ್ಚು ಕಡಿಮೆ ಜನಾಂಗೀಯ ದ್ವೇಶ ಕಾರುವವರು ಮಾಡುವಂತೆ ಯಾವುದೇ ಆದಾರವಿಲ್ಲದೆ ಒಬ್ಬರನ್ನೊಬ್ಬರು ಈ ರೀತಿಯಲ್ಲಿ ದ್ವೇಶಿಸುತ್ತಿರಲಿಲ್ಲ.

ಈ ಕಲ್ಲಿದ್ದಲು ಹಂಚಿಕೆಯ ಪ್ರಕರಣದಲ್ಲೂ ತಪ್ಪು ನಡೆದಿರುವುದಕ್ಕೆ ಮೂಲ ಕಾರಣ ಏನು ಎಂಬುದರ ಬಗ್ಗೆ ಚರ್ಚೆ ನಡೆಯಬೇಕಿತ್ತು; ಬೀದಿಯಲ್ಲಿ ಕಚ್ಚಾಡುವಂತೆ ಸಂಸತ್ತಿನಲ್ಲಿ ಕುಳಿತು ಒಬ್ಬರಿಗೊಬ್ಬರು ಬೆರಳು ತೋರಿಸಿಕೊಂಡು ಅರ್ತವಿಲ್ಲದೆ ಕೂಗಾಡುವುದರಿಂದ ಉಪಯೋಗವಿಲ್ಲ. ಹಾಗೆಯೇ, ಯಾವ ಆಳ್ಮೆಬದಿ ಆಡಳಿತಕ್ಕೆ ಬಂದರೂ ಈ ಹಗರಣಗಳೇತಕ್ಕೆ ನಿಲ್ಲುತ್ತಿಲ್ಲ ಎಂಬ ಕೇಳ್ವಿಯ ಬಗ್ಗೆ ಚರ್ಚೆಗಳು ನಡೆಯಬೇಕಿತ್ತು; ಒಬ್ಬರನ್ನು ಇನ್ನೊಬ್ಬರು ಬ್ರಶ್ಟರೆಂದು ಕರೆಯುವುದನ್ನೇ ಆಳ್ಮೆಗಾರಿಕೆ ಎಂಬಂತೆ ನಡೆದುಕೊಳ್ಳುತ್ತಿರುವುದರಿಂದ ಯಾವ ಉಪಯೋಗವೂ ಇಲ್ಲ.

ಪ್ರಾಯಶಹ ಈ ಕೇಳ್ವಿಗಳನ್ನು ಇವೆರಡು ಬದಿಗಳವರಾಗಲಿ ಎಡಬದಿಗಳವರಾಗಲಿ ಕೇಳಲೇ ಆರರೇನೋ. ಬೇರೆಯದೇ ಬದಿಯೊಂದು ಹುಟ್ಟಿಕೊಂಡು ಕೇಳಬೇಕೇನೋ. ಅದೇನೇ ಇರಲಿ, ನಾವಂತೂ ಮೊಟ್ಟಮೊದಲಿಗೆ ಕೇಳಬೇಕಿರುವುದೇನೆಂದರೆ, ಕೇಂದ್ರ ಸರ್ಕಾರಕ್ಕೆ ಈ ಕಲ್ಲಿದ್ದಲು ಹಂಚಿಕೆಯ ಹಂಗೇಕೆ ಎಂದು. ಕಲ್ಲಿದ್ದಲು ನಯ್ಸರ್ಗಿಕ ಸಂಪತ್ತಾದ್ದರಿಂದ ಅದನ್ನು ರಾಜ್ಯ ಸರ್ಕಾರಗಳ ಅದಿಕಾರದ ಪಟ್ಟಿಗೆ ಮೊದಲು ಸೇರಿಸಬೇಕು. ಇಡೀ ಬಾರತದ ಕಲ್ಲಿದ್ದಲೆಲ್ಲದರ ಮೇಲಿನ ಅದಿಕಾರವನ್ನು ದೆಹಲಿಯಲ್ಲಿ ಕುಳಿತಿರುವವರಿಗೆ ಕೊಟ್ಟರೇ ತಾನೇ ಈ ಮಟ್ಟದ ಹಗರಣಗಳಾಗುವುದು?

ಅವರಿಗೆ ಅದಿಕಾರವನ್ನು ಕೊಡದಿರುವುದು ಈ ಹಗರಣಗಳನ್ನು ಕಂಡಿತವಾಗಿ ನಿಲ್ಲಿಸುವ ಬಗೆ. ಹಿಂದೆ 'ಶಕ್ತಿ'ಗೆ ಸಂಬಂದಿಸಿದ ಅದಿಕಾರವನ್ನೆಲ್ಲ ಕೇಂದ್ರದಲ್ಲಿ ತೆಗೆದುಕೊಂಡು ಹೋಗಿ ಇಟ್ಟಿದ್ದು, ರಾಜ್ಯದವರು ತಾವೇ ಹೆಚ್ಚು ಬೆಳೆದುಬಿಟ್ಟರೆ ಕೇಂದ್ರ ಸರ್ಕಾರಕ್ಕೆ ಬೆಲೆಯಿರುವುದಿಲ್ಲ ಎಂಬ ಚಿಂತನೆಯಿಂದ. ಇದು ಮಂದಿಯಾಳ್ವಿಕೆ ಅಲ್ಲವಶ್ಟೆ ಅಲ್ಲ, ಮಿತಿಮೀರಿದ ಅದಿಕಾರವುಳ್ಳ ಕೇಂದ್ರವೊಂದು ಹುಟ್ಟಿಕೊಳ್ಳುವಂತೆ ಮಾಡಿ, ರಾಜ್ಯಗಳಲ್ಲಿ ಆಗಬಹುದಾದ ಚಿಕ್ಕ ಚಿಕ್ಕ ಹಗರಣಗಳಿಗಿಂತ ಅತಿ ದೊಡ್ಡ ಹಗರಣಗಳನ್ನು ಹುಟ್ಟಿಹಾಕುವ ಬಗೆಯೂ ಹವ್ದು.

ನಿಜಕ್ಕೂ ರಾಜ್ಯ ಸರ್ಕಾರಗಳು ಜನರಿಗೆ ಕೇಂದ್ರ ಸರ್ಕಾರಕ್ಕಿಂತ ಹತ್ತಿರ. ದೂರದಲ್ಲೂ ಹತ್ತಿರ, ನುಡಿಯಲ್ಲೂ ಹತ್ತಿರ, ಸಂಸ್ಕ್ರುತಿಯಲ್ಲೂ ಹತ್ತಿರ. ಹೀಗಿರುವುದರಿಂದ ರಾಜ್ಯ ಸರ್ಕಾರಗಳು ಜನರನ್ನು ಕೇಂದ್ರ ಸರ್ಕಾರವು ಮರುಳು ಮಾಡುವಶ್ಟು ಸುಲಬವಾಗಿ ಮಾಡಲಾರವು. ಏನೂ ಹಗರಣಗಳೇ ನಡೆಯಲಾರವು ಎಂದು ಹೇಳಲು ಬರುವುದಿಲ್ಲ, ಆದರೆ ಆ ಹಗರಣಗಳ ಎಣಿಕೆ ಮತ್ತು ಗಾತ್ರಗಳೆರಡೂ ಕಡಿಮೆಯಿರಲೇಬೇಕು. ಅದಿಕಾರವೆಂಬುದು ಜನರಿಂದ ದೂರ ಹೋದಶ್ಟೂ ಹಗರಣಗಳ ಸಾದ್ಯತೆ ಹೆಚ್ಚು. ಈ ತತ್ವವನ್ನಿಟ್ಟುಕೊಂಡು ಚರ್ಚೆಗಳು ನಡೆಯಬೇಕು. ಸುಮ್ಮನೆ ಹೇಳಿದ್ದನ್ನೇ ಹೇಳಿಕೊಂಡು ಒಬ್ಬರನ್ನೊಬ್ಬರು ಹೆಚ್ಚು-ಕಡಿಮೆ ಜನಾಂಗೀಯವಾಗಿ ನಿಂದಿಸುತ್ತಲೇ ಮುಂದುವರೆದರೆ ಹಗರಣಗಳೂ ನಿಲ್ಲುವುದಿಲ್ಲ, ಗಲಾಟೆಯೂ ನಿಲ್ಲವುದಿಲ್ಲ, ಬಾರತದ ಜನರಿಗೆ ನೆಮ್ಮದಿಯೂ ಇರುವುದಿಲ್ಲ, ಕಲ್ಲಿದ್ದಲೂ ಇರುವುದಿಲ್ಲ. ಎಲ್ಲವನ್ನೂ ಬಡಗಣದ ಬೆರಳೆಣಿಕೆಯ ವ್ಯಾಪಾರಿಗಳು ದೋಚಿಕೊಂಡು ಹೋಗುತ್ತಾರೆ.

(ಚಿತ್ರ: cnn.com)

ಮುಂದೆ ಓದಿ »

3.9.12

ಕೇಂದ್ರವು ಸಂಸ್ಕ್ರುತಿಗೆ ಸಂಬಂದಿಸಿದ ಪ್ರಶಸ್ತಿಗಳನ್ನು ಕೊಡುವುದು ನಿಲ್ಲಬೇಕು

3.9.12
ಕಳೆದ ವಾರ ತಮಿಳುನಾಡಿನ ಮುಕ್ಯಮಂತ್ರಿ ಕುಮಾರಿ ಜಯಲಲಿತಾ ಅವರು ಬಾರತ ಸರ್ಕಾರ ಕೊಡುವ ಪದ್ಮ
ಪ್ರಶಸ್ತಿಗಳಿಗೆ ತಾವು ಗುರುತಿಸಿದ್ದ ತಮಿಳು ಇನಿಗಾರರ (ಸಂಗೀತಗಾರರ) ಹೆಸರುಗಳನ್ನು ಕಡೆಗಣಿಸಿರುವುದು
ಸರಿಯಲ್ಲ ಎಂದು ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಜೊತೆಗೆ, ತಾವು ಗುರುತಿಸುವ
ಹೆಸರುಗಳಿಗೆ ಪದ್ಮ ಪ್ರಶಸ್ತಿಯನ್ನು ಕೊಡಲೇಬೇಕಾದ ದಿನ ಬಂದೇ ಬರುತ್ತದೆ ಎಂದು ಗುಡುಗಿದ್ದಾರೆ.

ಆದರೆ ರಾಜ್ಯಗಳ ಈ ಹೆಸರು ಗುರುತಿಸಾಟ, ಕೇಂದ್ರದವರು ಆ ಹೆಸರುಗಳನ್ನೆಲ್ಲ ಕಲೆ ಹಾಕಿ ಪ್ರಶಸ್ತಿಯನ್ನು ಯಾರಿಗೆ
ಕೊಡಬೇಕೆಂದು ತೀರ್ಮಾನಿಸುವಾಟ — ಇವೆಲ್ಲ ನಿಜಕ್ಕೂ ಬೇಕಿಲ್ಲ. ರಾಜ್ಯಗಳ ಕಲಾವಿದರ ಕಲೆಯನ್ನು ಗುರುತಿಸುವುದು ಬಿಡುವುದು ಕೇಂದ್ರದ ಕೆಲಸವೂ ಅಲ್ಲ, ಅದನ್ನು ಮಾಡುವ ಯೋಗ್ಯತೆಯೂ ಅದಕ್ಕಿಲ್ಲ. ದೂರದಲ್ಲಿರುವ, ಮತ್ತು ಬಹುಪಾಲು ಬಡಗಣದವರಿಂದ ಕಿಕ್ಕಿರಿದು ತುಂಬಿರುವ ಕೇಂದ್ರ ಸರ್ಕಾರದವರು ಹಲವು ಸಂಸ್ಕ್ರುತಿಗಳ ರಾಜ್ಯಗಳಿಂದ ಬರುವ ಶಿಫಾರಸ್ಸುಗಳಿಗೆಲ್ಲ ನ್ಯಾಯ ಹೇಗೆ ಒದಗಿಸಬಲ್ಲರು? ತಮ್ಮ ಸಂಸ್ಕ್ರುತಿಗೆ ಹತ್ತಿರವಾದುದನ್ನೇ ಆಯ್ದುಕೊಳ್ಳುವುದು ಮನುಶ್ಯನಿಗೆ ಸಹಜ. ಅಲ್ಲದೆ, ತಮಿಳುನಾಡು, ಕರ್ನಾಟಕ ಮುಂತಾದ ರಾಜ್ಯಗಳಲ್ಲಿ ಮಂದಿಯೆಣಿಕೆಯೂ ಕಡಿಮೆಯಿರುವುದರಿಂದ (ಮತ್ತು ಕಡಿಮೆ ಮಾಡಿಸುವ ಹುನ್ನಾರಗಳೂ ನಡೆಯುತ್ತಿರುವುದರಿಂದ) ಈ ರಾಜ್ಯಗಳ ಸಂಸ್ಕ್ರುತಿಗಳು ಬಡಗಣದವರ ಜನಜಂಗುಳಿಯಲ್ಲಿ ಮರೆಯುವಂತಾಗುವುದೂ ಸಹಜ. ಇಶ್ಟೆಲ್ಲ ಇರುವಾಗ ಬಡಗಣೇತರ ರಾಜ್ಯಗಳಿಂದ ಶಿಫಾರಸ್ಸು ಕಳಿಸಿದವರಿಗೆ ಬೇಜಾರಾಗುವುದರಲ್ಲಿ ಸೋಜಿಗವೇ ಇಲ್ಲ.

ನಿಜಕ್ಕೂ ಕುಮಾರಿ ಜಯಲಲಿತಾ ಅವರು ಈ ಪರಿಸ್ತಿತಿಯನ್ನು ಸರಿಪಡಿಸುವುದೇ ಆದರೆ, ಮತ್ತು ಮಾದ್ಯಮಗಳಲ್ಲಿ ಕೇಳಿ
ಬರುತ್ತಿರುವಂತೆ ಅವರು ಕೇಂದ್ರ ಮಟ್ಟದಲ್ಲಿ ಹೆಚ್ಚಿನ ಪಾಂಗನ್ನು ತೆಗೆದುಕೊಳ್ಳುವುದೇ ಆದರೆ, ಈ ಪ್ರಕರಣದಲ್ಲಿ
ಅವರು ತೆಗೆದುಕೊಂಡಿರುವ 'ತಾವು ಸೂಚಿಸಿದ ತಮಿಳು ಹೆಸರುಗಳಿಗೆ ಪ್ರಶಸ್ತಿ ಸಿಗಬೇಕು' ಎಂಬ ನಿಲುವಿಗಿಂತ
ಬೇರೆಯೇ ಒಂದು ನಿಲುವನ್ನು ತೆಗೆದುಕೊಳ್ಳುವುದು ವಾಸಿ. ಅದೇನೆಂದರೆ, ಹಲವು ಸಂಸ್ಕ್ರುತಿಗಳ ಬಾರತದಲ್ಲಿ
ಒಂದು ಸಂಸ್ಕ್ರುತಿಯವರದೇ ಮೇಲುಗಯ್ಯಿರುವ ಕೇಂದ್ರಕ್ಕೆ ಸಂಸ್ಕ್ರುತಿಗೆ ಸಂಬಂದಿಸಿದ ಪ್ರಶಸ್ತಿ-ಗಿಶಸ್ತಿ ಕೊಡುವ
ಅದಿಕಾರವಿರುವುದೇ ಸರಿಯಲ್ಲ; ಆದುದರಿಂದ ಪದ್ಮ-ಗಿದ್ಮಗಳಂತಹ ಪ್ರಶಸ್ತಿಗಳನ್ನು ರದ್ದುಮಾಡುವುದೇ ಉತ್ತಮ.

ಬದಲಾಗಿ, ಕೇಂದ್ರವು ಇಂದು ಕೊಡುತ್ತಿರುವ ರೀತಿಯ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರಗಳೇ
ಕೊಡುವಂತಾಗಬೇಕು. ಹವ್ದು, ಬಾರತ ಮಟ್ಟದ ಪ್ರಶಸ್ತಿಗಳನ್ನು ರಾಜ್ಯ ಸರ್ಕಾರಗಳು ಕೊಡುವಂತಾಗಬೇಕು.
ತಮ್ಮ ಸಂಸ್ಕ್ರುತಿಯ ಕಣ್ಣಿನಿಂದ ಪ್ರಶಸ್ತಿಗಳನ್ನು ಎಲ್ಲಾ ರಾಜ್ಯದವರೂ ಬಾರತ ಮಟ್ಟದಲ್ಲೇ ಕೊಡಲಿ,
ತಪ್ಪೇನಿಲ್ಲ. ಬಾರತಮಟ್ಟಕ್ಕೆ ಸೀಮಿತಗೊಳಸಲೂ ಬೇಕಿಲ್ಲ; ವಿಶ್ವಮಟ್ಟದಲ್ಲಿ ಕೂಡ ರಾಜ್ಯ ಸರ್ಕಾರಗಳು
ಪ್ರಶಸ್ತಿಗಳನ್ನು ಕೊಡಲಿ. ಇದಕ್ಕೆಲ್ಲ ಬೇಕಾದ ಸಾಂವಿದಾನಿಕ ತಿದ್ದುಪಡಿಗಳಾಗಬೇಕು. ಆಗ ರಾಜ್ಯಗಳು ತಂತಮ್ಮ
ಸಂಸ್ಕ್ರುತಿಯ ಕಣ್ಣಿನಲ್ಲಿ ಕಂಡಂತೆ ಪ್ರತಿಬೆಯನ್ನು ಎಲ್ಲಿದ್ದರೂ ಗುರುತಿಸಬಹುದು.

ಇದನ್ನು ಬಿಟ್ಟು ಬಡಗಣದವರ ಸಂಸ್ಕ್ರುತಿಯ ಕಣ್ಣಿನಿಂದ ಎಲ್ಲವನ್ನೂ ಅಳೆಯದೆ ಬೇರೆ ದಾರಿಯಿಲ್ಲದ ಕೇಂದ್ರ
ಸರ್ಕಾರವು ಸಂಸ್ಕ್ರುತಿಗೆ ಸಂಬಂದಿಸಿದ ಪ್ರಶಸ್ತಿಗಳನ್ನು ಕೊಡುವುದು ಮಂದಿಯಾಳ್ವಿಕೆಯೇ ಅಲ್ಲ. ಅಲ್ಲದೆ, ಈ
ಪ್ರಶಸ್ತಿಗಳಿಗೆ ಹಣವೇನು ಕೇಂದ್ರ ಸರ್ಕಾರಕ್ಕೆ ಬಾನಿಂದ ಉದುರುತ್ತಿಲ್ಲ. ಹಣವು ಜನರಿಂದ ದೂರದ ದೆಹಲಿಗೆ ಹೋಗಿ
ಸಾಂವಿದಾನಿಕ ಬ್ರಶ್ಟಾಚಾರದ ಸುಳಿಯಲ್ಲಿ ಸಿಕ್ಕಿಬೀಳುವ ಬದಲು ಹತ್ತಿರದ ರಾಜ್ಯಸರ್ಕಾರಗಳಿಗೆ ಹೋಗುವುದು
ಒಳಿತು, ಮತ್ತು ರಾಜ್ಯಗಳು ತಮಗೆ ಬೇಕಾದ ಪ್ರಶಸ್ತಿಗಳನ್ನು ಕೊಡಲು ಬಳಸಿಕೊಳ್ಳುವುದು ಒಳಿತು. ದೆಹಲಿಯಲ್ಲಿ
ಕುಳಿತವರು ಇಡೀ ಬಾರತದಲ್ಲಿ ಯಾವ ಕಲೆ ಇಲ್ಲವೇ ಸಂಸ್ಕ್ರುತಿ ಚೆನ್ನಾಗಿದೆ, ಯಾವ ಕಲಾವಿದನಿಗೆ ಮಾನ್ಯತೆ
ಸಿಗಬೇಕು ಎಂದೆಲ್ಲ ತೀರ್ಮಾನಿಸಲು ಬಾರತವೇನು ಇಂದಿಗೂ ವಸಾಹತಲ್ಲ, ಕೇಂದ್ರ ಸರ್ಕಾರದವರು ವಸಾಹತಿನ
ಮಾಲೀಕರೂ ಅಲ್ಲ.

(ಚಿತ್ರ: thehindu.com)

ಮುಂದೆ ಓದಿ »

29.8.12

ಬಗವದ್ಗೀತೆ, ವರ್ಣಸಂಕರ ಮತ್ತು ನುಡಿ ಹಾಗೂ ನುಡಿಜನಾಂಗಗಳ ಬೆರಕೆ

29.8.12
ಬಗವದ್ಗೀತೆಯ ಕರ್ಮಯೋಗವೆಂಬ ಹೆಸರಿನ ಮೂರನೇ ಅದ್ಯಾಯದಲ್ಲಿ, ಕ್ರಿಶ್ಣನು ತಾನೇಕೆ ಕರ್ಮ ಮಾಡುತ್ತೇನೆ ಎಂದು ಅರ್ಜುನನಿಗೆ ಬೇರೆ ಬೇರೆ ಕಾರಣಗಳನ್ನು ಕೊಟ್ಟು ವಿವರಿಸುತ್ತಾನೆ. ತಾನು ಕರ್ಮ ಮಾಡದಿದ್ದರೆ 'ಸಂಕರ'ವನ್ನು (ಎಂದರೆ ಬೆರಕೆಯನ್ನು) ಮಾಡಿದಂತವನಾಗಿ ಆ ಕಾರಣದಿಂದ ಜನರನ್ನು ಹಾಳುಮಾಡಿದವನಾಗಿ ಬಿಡುತ್ತೇನೆ ಎಂದು ಇಪ್ಪತ್ತನಾಲ್ಕನೇ ಶ್ಲೋಕದಲ್ಲಿ ಕೊಡುವ ಕಾರಣ ಅದರಲ್ಲಿ ಒಂದು. ಆ ಶ್ಲೋಕದಲ್ಲಿ ಯಾವ ರೀತಿಯ ಸಂಕರದ ಬಗ್ಗೆ ಕ್ರಿಶ್ಣ ಮಾತನಾಡುತ್ತಿರುವವೆಂದು ನೇರವಾಗಿ ಹೇಳಿಲ್ಲವಾದರೂ ಎಲ್ಲರೂ ಸಾಮಾನ್ಯವಾಗಿ 'ವರ್ಣಸಂಕರ' (ಎಂದರೆ, ಬ್ರಾಮಣ, ವಯ್ಶ್ಯ, ಕ್ಶತ್ರಿಯ ಮತ್ತು ಶೂದ್ರ ಎಂಬ ನಾಲ್ಕು ವರ್ಣಗಳು ಒಂದಕ್ಕೊಂದು ಬೆರೆತುಹೋಗುವುದು) ಎನ್ನುವುದರ ಬಗ್ಗೆಯೇ ಮಾತನಾಡುತ್ತಿದ್ದಾನೆ ಎಂದು ತಿಳಿದುಕೊಳ್ಳುವುದು ಸಾಮಾನ್ಯ. ಬಗವದ್ಗೀತೆಯ ದೇಶ-ಕಾಲದ ಕೂಡಣಕ್ಕೆ ಈ ಅರ್ತ ಪ್ರಾಯಶಹ ಚೆನ್ನಾಗಿಯೇ ಒಪ್ಪುತ್ತದೆ.

ಆದರೆ, ವರ್ಣ ವರ್ಣಸಂಕರ ಮುಂತಾದ ಪರಿಕಲ್ಪನೆಗಳು ಇಂದು ಅಳವಡುವುದಿಲ್ಲವಾದ್ದರಿಂದ ಈ ಸಂಕರದ ಬಗೆಗಿನ ಶ್ಲೋಕವನ್ನು ಇಂದು ಕರ್ಮಯೋಗಿಗಳಾಗಲು ಹಂಬಲಿಸುವವರು ಮರೆತುಬಿಡಬಹುದು ಎಂದು ಯಾರಿಗೇ ಆದರೂ ಅನ್ನಿಸಬಹುದು. ಆದರೆ ಅದೊಂದೇ ದಾರಿಯಲ್ಲ. ಬದಲಾಗಿ, ಇಂದು ಯಾವ ರೀತಿಯ ಬೆರಕೆಯನ್ನು ನಾವು ತಡಗಟ್ಟುವುದು ಒಳ್ಳೆಯದು, ಯಾವ ರೀತಿಯ ಬೆರಕೆಯಾಗುವುದರಿಂದ ಜನರು ಹಾಳಾಗುತ್ತಾರೆ, ಎಂಬ ಕೇಳ್ವಿಗಳಿಗೆ ಸರಿಯಾದ ಉತ್ತರ ಸಿಕ್ಕದರೆ, ಅಂತಹ ಬೆರಕೆಯನ್ನು ತಪ್ಪಿಸುವುದು ಕರ್ಮ ಮಾಡುವುದಕ್ಕೆ ಒಂದು ಕಾರಣ ಎಂದು ವಾದಿಸಬಹುದು. ಕ್ರಿಶ್ಣನೇನಾದರೂ ಇಂದಿನ ಕೂಡಣಕ್ಕೆ ಬಂದರೆ ಅವನು ಕರ್ಮ ಮಾಡಲು ಅಂತಹ ಬೆರಕೆಯನ್ನು ತಪ್ಪಿಸುವುದು ಒಂದು ಕಾರಣ ಎಂದು ವಾದಿಸಬಹುದು. ಆಗ ಇಪ್ಪತ್ತನಾಲ್ಕನೆಯ ಶ್ಲೋಕಕ್ಕೆ ಇಂದಿನ ಕೂಡಣದಲ್ಲೂ ಹುರುಳು ಬಂದಂತಾಗುತ್ತದೆ.

ವರ್ಣವೆಂಬ ಪರಿಕಲ್ಪನೆಯೇ ಸರಿಯಿಲ್ಲವೆಂದು ನನ್ನ ಅನಿಸಿಕೆ. ಅದರ ಹಿಂದಿನ ತಿಯರಿ ಏನೇ ಇದ್ದರೂ ಅದರಿಂದ ಬಾರತದ ಕೂಡಣದಲ್ಲಿ ಬಹಳ ತೊಂದರೆಗಳಾಗಿವೆ. ಆದರೂ ಅದನ್ನು ಸಮರ್ತಿಸಿಕೊಂಡು ಕ್ರಿಶ್ಣನು ಮಾತನಾಡಿರುವುದು ನಿಜವೇ ಆದರೆ, ಕೂಡಣದ ಕಟ್ಟಳೆಗಳನ್ನು ಮೀರುವುದು ಎಂತೆಂತವರಿಗೂ ಕಶ್ಟವಾಗಬಲ್ಲುದು ಎಂದು ತೋರಿಸುತ್ತದೆ. ಇಂದು ಅಂತಹ ಯಾವ ಕಟ್ಟಳೆಗಳಿವೆ? ಇಂದು ‘ವರ್ಣ’ಕ್ಕೆ ಹೋಲಿಸಬಹುದಾದುದೇನಿದೆ? ಇಂದು ಯಾವುಗಳ ಬೆರಕೆ ಸರಿಯಲ್ಲವೆಂದು ಕೂಡಣವೇ ಹೇಳುತ್ತಿದೆ? ಯಾವುಗಳ ಬೆರಕೆಯಾದರೆ ಆ ಕಾರಣದಿಂದ ಜನರು ಹಾಳಾಗುತ್ತಾರೆ? ಯಾವುಗಳ ಬೆರಕೆಯಿಂದ ಜನರು ಹಾಳಾಗುತ್ತಾರೆ ಎಂದು ನಮಗೆ ಸ್ಪಶ್ಟವಾಗಿ (ಕ್ರಿಶ್ಣನಿಗೆ ಅಂದು ವರ್ಣಗಳ ಬೆರಕೆಯಿಂದ ಜನ ಹಾಳಾಗುತ್ತಾರೆ ಎಂದು ಹೇಗೆ ಸ್ಪಶ್ಟವಾಗಿದ್ದಂತಿದೆಯೋ ಹಾಗೆ) ಕಾಣಿಸುತ್ತಿದೆ? ಯಾವುಗಳ ಬೆರಕೆಯನ್ನು ಆದಶ್ಟೂ ನಿಲ್ಲಿಸುವುದು ಬಹಳ ಮುಕ್ಯವಾದ ಕೆಲಸ? ಯಾವುಗಳ ಬೆರಕೆಯನ್ನು ನಿಲ್ಲಿಸುವುದಕ್ಕೋಸ್ಕರವಾದರೂ ಕರ್ಮಯೋಗಿಗಳು ಕರ್ಮವನ್ನು ಮಾಡಬೇಕು?

ಮೇಲಿನ ಎಲ್ಲ ಕೇಳ್ವಿಗಳಿಗೂ ನುಡಿ ಮತ್ತು ನುಡಿಜನಾಂಗಗಳೆಂಬ ಎರಡು ಉತ್ತರಗಳಿವೆ. ವರ್ಣಗಳಲ್ಲಿ ಏರ್ಪಟ್ಟಂತೆ ನುಡಿಗಳಲ್ಲಿ ಕೂಡ ಮೇಲುಕೀಳುಗಳು ಏರ್ಪಟ್ಟಿವೆ. ನುಡಿಗಳ ಮತ್ತು ನುಡಿಜನಾಂಗಗಳ ಬೆರಕೆಯನ್ನು ಇಂದು ನಿಲ್ಲಿಸಬೇಕಿದೆ, ಏಕೆಂದರೆ ಪ್ರತಿಯೊಂದು ನುಡಿ ಮತ್ತು ನುಡಿಜನಾಂಗವೂ ಆದಶ್ಟೂ ಬೇರೆಬೇರೆಯಾಗಿ ಏಳಿಗೆ ಹೊಂದಬೇಕಿದೆ. ಬೆರಕೆಯಿಂದ ಗಂಡಾಂತರವಿದೆ, ಏಕೆಂದರೆ ಮೇಲ್ದರ್ಜೆಯ ನುಡಿಗಳು ಕೆಳದರ್ಜೆಯ ನುಡಿಗಳನ್ನು ಅವುಗಳ ನುಡಿಗರ ಜೊತೆಗೆ ಹಾಳುಮಾಡುತ್ತಿವೆ. ಹಲವಾರು ಮೇಲುದರ್ಜೆಯ ನುಡಿಗಳು ಕೆಳದರ್ಜೆಯ ನುಡಿಗಳನ್ನು ಹಾಳುಮಾಡುವುದರೊಡನೆಯೇ ಮತ್ತಶ್ಟು ಏಳಿಗೆ ಹೊಂದುತ್ತಿವೆ; ಇದಕ್ಕೆ ಮೂಲ ಕಾರಣ ಬೆರಕೆ. ಬೆರಕೆಯನ್ನು ತಪ್ಪಿಸುವುದರಿಂದ ಕೆಳದರ್ಜೆಯ ನುಡಿಗಳಿಗೆ ಮತ್ತು ಅವುಗಳ ನುಡಿಗರಿಗೆ ಉಸಿರಾಡಲು ಗಾಳಿ ಸಿಕ್ಕಂತಾಗುತ್ತದೆ, ತಮ್ಮ ಏಳಿಗೆಯ ಕಡೆಗೆ ಗಮನ ಹರಿಸಲು ಸಾದ್ಯವಾಗುತ್ತದೆ. ಬೆರಕೆ ಮುಂದುವರೆದರೆ ಇದು ಸಾದ್ಯವಿಲ್ಲ.

ವರ್ಣಸಂಕರವನ್ನು ತಪ್ಪಿಸುವುದಕ್ಕೂ ನುಡಿಬೆರಕೆ ಮತ್ತು ನುಡಿಜನಾಂಗಗಳ ಬೆರಕೆಯನ್ನು ತಪ್ಪಿಸುವುದಕ್ಕೂ ಒಂದು ಮುಕ್ಯವಾದ ವ್ಯತ್ಯಾಸವೇನೆಂದರೆ, ವರ್ಣಸಂಕರವನ್ನು ತಪ್ಪಿಸುವುದರಿಂದ ಕೂಡಣದ ಮೇಲು-ಕೀಳುಗಳನ್ನು ತಡೆಗಟ್ಟಲಾಗುವುದಿಲ್ಲ, ಆದರೆ ನುಡಿಬೆರಕೆ ಮತ್ತು ನುಡಿಜನಾಂಗಗಳ ಬೆರಕೆಯನ್ನು ತಪ್ಪಿಸುವುದರಿಂದ ಅದನ್ನು ತಡೆಗಟ್ಟಲಾಗುತ್ತದೆ. ವರ್ಣಸಂಕರವನ್ನು ತಪ್ಪಿಸಲು ಕ್ರಿಶ್ಣನು ಹೊರಟಿದ್ದು ನಿಜವೇ ಆದರೆ, ಆಗ ಮೇಲ್ವರ್ಣದವರು ಕೆಳವರ್ಣದವರಿಗಿಂತ ತಾವಾಗಿಯೇ ದೂರ ಉಳಿಯಬೇಕೆಂದಿದ್ದರು. ಆದರೆ ನುಡಿಗಳ ವಿಶಯದಲ್ಲಿ ಹಾಗಲ್ಲ; ಮೇಲ್ನುಡಿಗಳ ಜನರು ಕೆಳನುಡಿಗಳ ಜನರೊಡನೆ ಬೆರೆತು, ಅವರ ನೆಲವನ್ನು ತಮ್ಮದಾಗಿಸಿಕೊಂಡು, ಅವರ ಗಾಳಿಯನ್ನು ತಾವೇ ಉಸಿರಾಡಿ, ಕೆಳನುಡಿಗಳ ಜನರನ್ನು ಇಲ್ಲವಾಗಿಸುವುದಕ್ಕೂ ತಾವೇ ಮುಂದೆಬರುತ್ತಿದ್ದಾರೆ. ನುಡಿಬೆರಕೆಯನ್ನು ತಪ್ಪಿಸುವುದೆಂದರೆ ಮೇಲ್ನುಡಿಗಳ ಈ ಹುನ್ನಾರವನ್ನು ತಪ್ಪಿಸುವುದು. ಇಶ್ಟೆಲ್ಲ ಇರುವಾಗ, ನುಡಿಯೆಂದರೆ ಬರೇ ಒಬ್ಬರನ್ನೊಬ್ಬರು ಅರ್ತಮಾಡಿಕೊಳ್ಳುವ ಒಂದು ಸಾದನವೆಂದು ತಿಳಿದುಕೊಂಡಿರುವವರು ಮತ್ತೊಮ್ಮೆ, ಮಗದೊಮ್ಮೆ ಯೋಚಿಸಬೇಕು. ಹಾಗೆಯೇ ಬಾರತದ ನುಡಿಜನಾಂಗಗಳೆಲ್ಲವೂ ಒಂದೇ, ಒಂದಕ್ಕೊಂದು ಬೆರಕೆಯಾದರೆ ಒಳಿತೆಂದು ತಿಳಿದುಕೊಂಡಿರುವವರು ಕೂಡ ಮತ್ತೊಮ್ಮೆ, ಮಗದೊಮ್ಮೆ ಯೋಚಿಸಬೇಕು. ಸಿರಿಗನ್ನಡಂ ಗೆಲ್ಗೆ.

ಮುಂದೆ ಓದಿ »